Wednesday, April 24, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು 11,12,13,14,15

                          
(ಮುಂದುವರಿದ ಭಾಗ...)

ಹನ್ನೊಂದನೇ ಅವತಾರ

                       ಸುರಾಸುರಾಣಾಮುದಧಿಂ ಮಥ್ನ ತಾಂ ಮಂದರಾಚಲಂ|
                       ದಧ್ರೇ ಕಮಠರೂಪೇಣ ಪೃಷ್ಠ ಏಕಾದಶೇ ವಿಭುಃ||       ಭಾಗವತ: 1-3-16

 ಸುರರು ಮತ್ತು ಅಸುರರು ಸೇರಿ ಅಮೃತ ಪಡೆಯುವುದಕ್ಕಾಗಿ ಮಂದರ ಪರ್ವತವನ್ನು ಕಡಗೋಲಾಗಿ ಬಳಸಿ, ಸಮುದ್ರವನ್ನು ಮಥನ ಮಾಡುವ ಕಾಲದಲ್ಲಿ ಆ ಮಂದರ ಪರ್ವತವು ಸಮುದ್ರದಲ್ಲಿ ಮುಳಗಿಹೋಗದಂತೆ ಭಗವಂತ ಕೂರ್ಮ (ಆಮೆ) ರೂಪದಿಂದ ಆ ಮಂದರ ಪರ್ವತವನ್ನ ತನ್ನ ಬೆನ್ನಮೇಲೆ ಹೊತ್ತ ರೂಪ ಇದು. ಇದು ಹನ್ನೊಂದನೇ ಅವತಾರ. ಈ ಒಂದು ಘಟನೆ ಕಾಲದಲ್ಲಿ ಭಗವಂತ ನಾಲ್ಕು ರೂಪಗಳನ್ನು ಧರಿಸಿದ್ದಾನೆ. ಆದರೆ ಭಗವಂತನ ಮೂರು ರೂಪಗಳನ್ನು ಮಾತ್ರ ಭಾಗವತದಲ್ಲಿ ಉಲ್ಲೇಖಿಸಲಾಗಿದೆ.


ಹನ್ನೆರಡು ಮತ್ತು ಹದಿಮೂರನೇ ಅವತಾರಗಳು

                       ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ|
                       ಅಪಾಯಯತ್ಸುರಾನನ್ಯಾನ್ಮೋಹಿನ್ಯಾ ಮೋಹಯನ್ ಸ್ತ್ರಿಯಾ||  ಭಾಗವತ: 1-3-17


ಸಮುದ್ರ ಮಥನವಾದ ನಂತರ ಮೊದಲು ವಿಷ ಬಂತು. ನಂತರದದಲ್ಲಿ ಮದ್ಯ-ಕಾಮಧೇನು-ಕಲ್ಪವೃಕ್ಷ-ಐರಾವತ ಬಂದವು. ತದನಂತರದಲ್ಲಿ ಸೋಮ - ಲಕ್ಷಿಯರು ಉದಿಸಿದರು. ಕೊನೆಗೆ ಅಮೃತ ಬಂತು. ಆ ಅಮೃತವನ್ನು ಕೈಯಲ್ಲಿ ಹಿಡಿದುಕೊಂಡು ಕಾಣಿಸಕೊಂಡ ರೂಪ ಅದು ಭಗವಂತನ ಧನ್ವಂತರೀ ರೂಪ. ಇದು ಹನ್ನೆರಡನೇ ಅವತಾರ

ಅಮೃತ ಬಂದ ನಂತರ ಅಲ್ಲಿದ್ದ ಅಸುರರು ಆ ಅಮೃತ ತಮಗೆ ಬೇಕೆಂದು ಗದ್ದಲವೆಬ್ಬಿಸಿದಾಗ ಭಗವಂತ ಮೋಹಿನಿ ರೂಪ ತಾಳಿ ಅಸುರರನ್ನು ಮೋಹಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ . ಈ ಮೋಹಿನಿ ರೂಪ ಹದಿಮೂರನೇ ರೂಪ.
ಇನ್ನೊಂದು ರೂಪವಿದೆ. ಸುರಾಸುರರು ಸಮುದ್ರ ಮಥನ ಮಾಡುತ್ತಿರುವ ಕಾಲದಲ್ಲಿ ಭಗವಂತ ಅಜಿತ ಎಂಬ ರೂಪದಿಂದ ದೇವತೆಗಳ ಕಡೆಗೆ ನಿಂತು ಮಥನ ಕಾರ್ಯದಲ್ಲಿ ಪಾಲ್ಗೊಂಡಿದ್ದ ಎಂದು ಶಾಸ್ತ್ರಕಾರರು ಗುರುತಿಸಿದ್ದಾರೆ.


ಹದಿನಾಲ್ಕನೇ ಅವತಾರ

           ಚತುರ್ದಶಂ ನಾರಸಿಂಹಂ ಬಿಭ್ರದ್ದ್ಯೆತ್ಯೇನ್ದ್ರಮೂರ್ಜಿತಮ್|
                   ದದಾರ ಕರಜ್ಯೆರ್ವಕ್ಷಸ್ಯೇರಕಾಂ ಕಟಕೃದ್ಯಥಾ ||               ಭಾಗವತ: 1-3-18


ಮಹಾದ್ಯೆತ್ಯನಾದ ಹಿರಣ್ಯಕಶಿಪು ಸ್ವತಃ ಬಲಶಾಲಿ, ಅದರ ಮೇಲೆ ಅವನಿಗೆ ವರದ ಬಲ. ಇದರಿಂದಾಗಿ ಮಹಾಬಲಶಾಲಿಯಾಗಿ ಮದೋನ್ಮತ್ತನಾಗಿದ್ದ ಅವನ ಬಲದ ಮುಂದೆ ಎಲ್ಲಾ ದೇವತೆಗಳು ಅಸಹಾಯಕರಾಗಿದ್ದರು. ಇಂತಹ ಪ್ರಸಂಗ ಬಂದಾಗ, ಆ ಮಹಾದೈತ್ಯನ ಮಗನಾದ, ಶ್ರೀಹರಿಯ ಅನನ್ಯ ಭಕ್ತನಾದ ಪ್ರಹ್ಲಾದನಿಗಾಗಿ, ಭಗವಂತ ನರಸಿಂಹನಾಗಿ ಕಂಬದಿಂದ ಮೂಡಿಬಂದು ಆ ಹಿರಣ್ಯಕಶಿಪುವನ್ನು ತನ್ನ ತೊಡೆಯಮೇಲಿಟ್ಟುಕೊಂಡು, ಅವನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ, ಹುಲ್ಲನ್ನು ಸೀಳಿತೆಗೆಯುವಂತೆ ಸೀಳಿ ಅವನನ್ನು ಸಂಹರಿಸಿದ. ಈ ರೀತಿಯಾಗಿ '' ಸತ್ಯಂ ವಿಧಾತುಂ ನಿಜ ಭೃತ್ಯಭಾಷಿತಂ'' ಎಂಬ ವಚನದಂತೆ ತನ್ನ ಭಕ್ತನಾದ ಚತುರ್ಮುಖ ಬ್ರಹ್ಮದೇವರು ಕೊಟ್ಟ ವರವನ್ನು ಹಾಗೂ ಭಕ್ತ ಪ್ರಹ್ಲಾದನ ನುಡಿಯಂತೆ ಕಂಬದಿಂದ ಉದ್ಭವಿಸಿ ಬಂದು ತನ್ನ ಭಕ್ತರ ವಾಕ್ಯಗಳನ್ನು ಸತ್ಯ ಮಾಡಿದ ಅವತಾರ - ಇದು ಹದಿನಾಲ್ಕನೇ ಅವತಾರ.


ಹದಿನೈದನೇ ಅವತಾರ
                       ಪಂಚದಶಂ ವಾಮನಕಂ ಕೃತ್ವಾಗಾದಧ್ವರಂ ಬಲೇಃ|
                       ಪಾದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸ್ತ್ರಿವಿಷ್ಟಪಂ||      ಭಾಗವತ: 1-3-19


ಪ್ರಹ್ಲಾದನ ಮಗ ವೀರೋಚನ, ಅವನ ಮಗ ಬಲಿ. ಭಗವಂತ ಪುಟ್ಟ ಹುಡುಗ ವಾಮನನಾಗಿ ಬಲಿಚಕ್ರವರ್ತಿ ಯಜ್ಷ ನಡೆಸುತ್ತಿದ್ದ ಸ್ಥಳಕ್ಕೆ ಹೋಗಿ ಮೂರು ಹೆಜ್ಜೆ ಭುಮಿಯನ್ನು ದಾನವನ್ನಾಗಿ ಬೇಡಿದ. ಹಾಗೆ ದಾನವಾಗಿ ಪಡೆದು, ಒಂದು ಹೆಜ್ಜೆಯಿಂದ ಇಡೀ ಭುಮಿಯನ್ನು, ಇನ್ನೊಂದು ಹೆಜ್ಜೆಯಿಂದ ಇಡೀ ಆಕಾಶವನ್ನು ಆವರಿಸಿಕೊಂಡ. ಕೊನೆಯದಾದ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ಕೋರಿಕೆ ಮೇರೆಗೆ ಅವನ ತಲೆಯ ಮೇಲಿಟ್ಟು ಅವನನ್ನು ಅನುಗ್ರಹಿಸಿದ ಅವತಾರ - ವಾಮನ ಅವತಾರ - ಇದು ಹದಿನೈದನೇ ಅವತಾರ.

(ಮುಂದುವರೆಯುವುದು...)

ಕೆ. ಸತ್ಯನಾರಾಯಣ ರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ.