Wednesday, February 27, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು - 9, 10

             
(ಮುಂದುವರಿದ ಭಾಗ)

ಒಂಭತ್ತನೇ ಅವತಾರ

                ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ |
                ದುಗ್ಧೇಮಾಮೋಷಧೀರ್ವಿಪ್ರಾಸ್ತೇನಾಯಂ ಸ ಉಶತ್ತಮಃ ||.     ಭಾಗವತ. 1-3-14.


     ಸ್ವಾಯಂಭುವ ಮನುವಿನ ಇನ್ನೊಬ್ಬಮಗ ಉತ್ತಾನಪಾದ. ಈ ಉತ್ತಾನಪಾದನ ಮಗನೇ ಧೃವ. ಈ ಧೃವನ ನಂತರದಲ್ಲಿ ಇದೇ ವಂಶದಲ್ಲಿ ಮುಂದೆ ಚಕ್ಷುಷ್ ಎನ್ನುವ ಒಬ್ಬ ರಾಜ. ಆ ಚಕ್ಷುಷನ ಮಗನೇ ಚಾಕ್ಷುಷ ಮನು.  ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹಿಂದಿನ ಮನ್ವಂತರ, ಆರನೇ ಮನ್ವಂತರವೇ ಚಾಕ್ಷುಷ ಮನ್ವಂತರ. ಈ ಮನ್ವಂತರದಲ್ಲಿ ಮುಂದೆ ಪೃಥು ಚಕ್ರವರ್ತಿ ಎನ್ನುವವನು ಬರುತ್ತಾನೆ. ಇವನಲ್ಲಿ ಭಗವಂತನ ವಿಶೇಷ ಸನ್ನಿಧಾನ. ಹೀಗೆ ಇದು ಭಗವಂತನ ಪೂರ್ಣಾವತಾರವಲ್ಲ. ಭಗವಂತನ ವಿಶೇಷ ಆವೇಶಾವತಾರ.

     ದೇಶವನ್ನಾಳುವ ಪ್ರತಿಯೊಬ್ಬ ರಾಜನಲ್ಲಿ ಒಂದು ಭಗವಂತನ ರೂಪ ಸನ್ನಿಹಿತವಾಗಿರುತ್ತದೆ. ಅದನ್ನು ರಾಜರಾಜೇಶ್ವರ ರೂಪ ಎಂದು ಕರೆಯುತ್ತಾರೆ. ಈ ರೂಪದಿಂದ ಭಗವಂತ ಎಲ್ಲ ರಾಜರ ಒಳಗಿದ್ದು ಆಡಳಿತ ನಡೆಸುತ್ತಾನೆ. ಈ ಕಾರಣಕ್ಕಾಗಿಯೇ ''  ರಾಜಾ ಪ್ರತ್ಯಕ್ಷ ದೇವತಾ '' ಎನ್ನಿಸಿಕೊಳ್ಳುತ್ತಾನೆ.  ಪೃಥು ಚಕ್ರವರ್ತಿಯಲ್ಲಿ ಈ ರಾಜರಾಜೇಶ್ವರ ರೂಪವಲ್ಲದೆ, ಪೃಥು ಎಂಬ ಹೆಸರಿನ ಭಗವಂತನ ವಿಶೇಷ ಆವೇಶವಿತ್ತು ಎಂದು ಭಾಗವತ ಪುರಾಣ ಹೇಳುತ್ತದೆ.

     ಈ ಪೃಥು ಚಕ್ರವರ್ತಿಯ ಅಜ್ಜ ಅಂದರೆ ತಂದೆಯ ತಂದೆ ಅಂಗರಾಜ.  ಈ ಅಂಗ, ವಂಗ, ಕಳಿಂಗ  ಎಂಬ ಹೆಸರಿನ ದೇಶಗಳಲ್ಲಿ, ಅಂಗ ಎಂಬ ದೇಶಕ್ಕೆ, ಈ ಹೆಸರು ಬಂದಿದ್ದು ಈ ಅಂಗರಾಜನಿಂದಲೇ. ಇವನು ಬಹಳ ಒಳ್ಳೆಯ ರಾಜ. ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದನು. ಈ ಅಂಗ ರಾಜನಿಗೆ ಒಬ್ಬ ಮಗನಿದ್ದನು. ಅವನ ಹೆಸರು ವೇನ. ಇವನು ಮಹಾ ದುಷ್ಟ. ಇವನು ಚಿಕ್ಕವನಿರುವಾಗಿನಿಂದಲೇ ಬಹಳ ಕ್ರೂರಿಯಾಗಿದ್ದ. ಬೇರೆಯವರ ಮಕ್ಕಳನ್ನು ತನ್ನೊಡನೆ ಆಟವಾಡಲು ಕರೆಯುತ್ತಿದ್ದ. ರಾಜನ ಮಗನಾದ್ದರಿಂದ ಅವನ ಮಾತನ್ನು ತಿರಸ್ಕರಿಸುವಹಾಗಿರಲಿಲ್ಲ. ಹಾಗೆ ಆಡಲಿಕ್ಕೆಂದು ಮಕ್ಕಳೊಡನೆ ಸ್ವಲ್ಪಹೊತ್ತು ಆಟವಾಡಿ ನಂತರದಲ್ಲಿ ಆ ಮಕ್ಕಳನ್ನು ಭಾವಿಗೆ ತಳ್ಳಿಬಿಡುತ್ತಿದ್ದನಂತೆ. ಆ ಮಕ್ಕಳು ಭಾವಿಯಲ್ಲಿ ನೀರಿನಲ್ಲಿ ವಿಲವಿಲ ಒದ್ದಾಡಿ ಸಾಯುವುದನ್ನು ಕಂಡು ಖುಷಿ ಪಡುತ್ತಿದ್ದನಂತೆ. ಎಷ್ಟೇ ಪ್ರಯತ್ನ ಪಟ್ಟರೂ ಅಂಗರಾಜನಿಗೆ ಈ ಮಗನನ್ನು ತಿದ್ದಲಿಕ್ಕಾಗಲೀ, ನಿಯಂತ್ರಣದಲ್ಲಿಡುವುದಕ್ಕಾಗಲೀ ಸಾಧ್ಯವಾಗದೇ ಹೋಯಿತು. ಇವನ ಈ ವರ್ತನೆಯಿಂದ ಬೇಸತ್ತ ರಾಜ, ಕಣ್ಣೀರು ಸುರಿಸುತ್ತಾ, ಒಂದು ದಿನ ರಾತ್ರಿ ತನ್ನ ಹೆಂಡತಿಗೆ, ಮಗನಿಗೆ, ಯಾರಿಗೂ ಹೇಳದೆ ಅರಮನೆ ಬಿಟ್ಟು ಹೊರಟುಹೋಗಿ ಕಾಡು ಸೇರಿಬಿಟ್ಟನಂತೆ. ಈ ವಿಷಯ ತಿಳಿದನಂತರ, ಊರಿನ ಪ್ರಮುಖರು, ಋಷಿಗಳು ಸೇರಿ ಆಗಿನ ಕಾಲದ ಸಂಪ್ರದಾಯದಂತೆ, ಈ ವೇನನನ್ನೇ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಕಟ್ಟಿದರು. ರಾಜನಾದ ತಕéಣ ಈ ವೇನನು ಒಂದು ಆಜ್ಞೆಯನ್ನು ಹೊರಡಿಸಿ, ಇನ್ನು ಮುಂದೆ ಈ ದೇಶದಲ್ಲಿ ಯಾರೂ ಪ್ರತ್ಯೇಕ ದೇವರ ಪೂಜೆ ಮಾಡುವುದನ್ನು, ದೇವರಿಗೆ ಕಾಣಿಕೆಗಳನ್ನು ಸಮರ್ಪಿಸುವುದನ್ನು ನಿಷೇಧಿಸಿದನು. ತಾನು ರಾಜನಾದುದರಿಂದ, '' ರಾಜಾ ಪ್ರತ್ಯಕ್ಷ ದೇವತಾ '' ಎಂದು ತಿಳಿದು, ತನಗೇ ಪೂಜೆ-ಕಾಣಿಕೆಗಳನ್ನು ಸಲ್ಲಿಸಬೇಕು, ಬೇರೆ ಇತರೆ ಯಾವುದೇ ಧಾರ್ಮೀಕ ಕಾರ್ಯಗಳು ನಡೆಯಕೂಡದೆಂದು ಕಟ್ಟಪ್ಪಣೆ ವಿಧಿಸಿದ. ಇದರ ಪರಿಣಾಮವಾಗಿ, ಆ ದೇಶದಲ್ಲಿ ಭೀಕರ ಬರಗಾಲ ಪ್ರಾಪ್ತವಾಯಿತು. ತಿನ್ನಲಿಕ್ಕೆ ಅನ್ನವಿಲ್ಲ, ಕುಡಿಯಲು ನೀರಿಲ್ಲ, ಹಸುಗಳಿಗೂ ಸಹ ತಿನ್ನಲು ಹುಲ್ಲಿಲ್ಲದಂತಹ ಪ್ರಸಂಗ ಉಂಟಾಯಿತು. ಇದರಿಂದಾಗಿ, ಭೀಕರ ಸಾವು-ನೋವುಗಳುಂಟಾಗಿ, ದನಗಳ - ಮನುಷ್ಯರ ಹೆಣಗಳ ರಾಶಿಯೇ ಬಿದ್ದಿತಂತೆ. ಇದನ್ನು ಸಹಿಸಲಾಗದೆ ಆಗಿನ ಋಷಿಗಳು ಈ ಪರಿಸ್ಥಿತಿಗೆ ಕಾರಣನಾದ ಆ ವೇನನನ್ನು ಸಿಂಹಾಸನದಿಂದ ಕೆಳಗೆಳೆದು, ತಮ್ಮ ತಪಃಶ್ಶಕ್ತಿಯಿಂದ ಹೂಂಕಾರಮಾಡಿ ಅವನನ್ನು ಕೊಂದುಹಾಕಿದರಂತೆ.  ಮುಂದೆ ಆ ಋಷಿಗಳು ಭಗವಂತನ್ನು, ಒಬ್ಬ ಒಳ್ಳೇ ರಾಜನನ್ನು ಕೊಡುವಂತೆ ಪ್ರಾರ್ಥಿಸಿಕೊಂಡು, ಆ ವೇನನ ದೇಹವನ್ನೇ ಕಟೆದು (ಮಥಿಸಿ) ಒಂದು ಜೀವವನ್ನು ಸೃಷ್ಟಿಸಿದರು. ಅವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಗಟ್ಟಿದರು. ಅವನೇ ಪೃಥುಚಕ್ರವರ್ತಿ. ಇವನು ಬಹಳ ಒಳ್ಳೆಯವನಾಗಿದ್ದು ಉತ್ತಮ ಆಡಳಿತವನ್ನು ನಡೆಸಿಕೊಂಡುಹೋದನು.

     ಇವನ ಆಡಳಿತ ಕಾಲ ಬರುವವರೆಗೆ, ಭೂಮಿಯಲ್ಲಿ ನಾಗರೀಕತೆ ಎನ್ನುವುದು ಇರಲಿಲ್ಲ. ಭೂಮಿಯೂ ಏರುಪೇರಾಗಿತ್ತು. ಸಮತಟ್ಟಾದ ಜಾಗವಿದ್ದಲ್ಲಿ ಮನೆ ಕಟ್ಟುವುದು ಎಲ್ಲಿ ನೀರು ನಿಂತಿರುತ್ತದೋ ಅಲ್ಲಿ ಬೇಸಾಯ ಮಾಡುವುದು ಹೀಗೆ ನಡೆದಿತ್ತು. ಆಗಿನ ಕಾಲದಲ್ಲಿ ಜನಸಂಖ್ಯೆಯೂ ಸಹ ಬಹಳ ಕಡಿಮೆ ಇತ್ತು.

     ಈ ಪೃಥುರಾಜನ ಆಡಳಿತ ಕಾಲದಲ್ಲಿ, ಅವನು ಏರುಪೇರಾಗಿದ್ದ ಭುಮಿಯನ್ನು ಸಮತಟ್ಟುಗೊಳಿಸಿ ಜನರ ವಸತಿಗಾಗಿ, ವ್ಯವಸಾಯಕ್ಕಾಗಿ, ಹುಲ್ಲುಗಾವಲಿಗಾಗಿ, ಮತ್ತು ಅರಣ್ಯವನ್ನು ಬೆಳೆಸುವುದಕ್ಕಾಗಿ, ಹೀಗೆ ಬೇರೆ ಬೇರೆ ಪ್ರಯೋಜನಕ್ಕಾಗಿ ಬೇರೆ ಬೇರೆ ಪ್ರದೇಶಗಳನ್ನಾಗಿ ವಿಭಾಗಮಾಡಿ, ನಗರಗಳನ್ನು ನಿರ್ಮಾಣಮಾಡಿದ. ನಗರಗಳಲ್ಲಿ, ವಾಹನಗಳು ಓಡಾಡಲು ರಸ್ತೆಗಳು, ವ್ಯವಸಾಯಕ್ಕಾಗಿ ಕೆರೆ-ಜಲಾಶಯಗಳು, ಕಾಲುವೆಗಳು, ಚರಂಡಿಗಳು, ಉದ್ಯಾನವನಗಳನ್ನು ನಿರ್ಮಾಣಮಾಡಿಸಿದ. ಹೀಗೆ ಜಗತ್ತಿನಲ್ಲಿ ಒಂದು ವ್ಯವಸ್ಥಿತವಾದ ನಗರ-ನಾಗರೀಕತೆಯ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಪರಿಚಯಿಸಿದವನೇ ಈ ಪೃಥುರಾಜ. ಈ ರೀತಿಯಾಗಿ ಭೂಮಿಯಲ್ಲಿ ಸಮೃಧ್ಧವಾಗಿ ಬಂಗಾರದ ಬೆಳೆಯನ್ನು ಬೆಳೆದು ದೇಶದಲ್ಲಿ ಸುಭಿಕ್ಷೆಯುಂಟಾಗುವಂತೆ ಮಾಡಿದ. ಈ ರೀತಿಯಾಗಿ ಭೂಮಿಗೆ ಒಂದು ಹೊಸ ಜನ್ಮವನ್ನೇ ಕೊಟ್ಟಿದ್ದರಿಂದ ಈ ಭುಮಿಯನ್ನು ಜನ ಪೃಥುರಾಜನ ಮಗಳೆಂದು ಕರೆದರು. ಪೃಥುರಾಜನ ಮಗಳು ಎನಿಸಿಕೊಂಡ ಭೂಮಿಗೆ ಈ ರಾಜನಿಂದಾಗಿ ಪೃಥಿವೀ ಎಂಬ ಹೆಸರು ಬಂದಿತು. ಈ ಕಾರಣದಿಂದ ಪ್ರಜೆಗಳು ಅವನನ್ನು ಉಶತ್ತಮ ಎಂದು ಕರೆದರು. ಉಶತ್ತಮ ಎಂದರೆ ಸತ್ಯಕಾಮ ಅಂದರೆ ಬಯಸಿದ್ದನ್ನು ಮಾಡಬಲ್ಲವ ಎಂದು. ಹೀಗೆ ದೇಶದ ಸಮಗ್ರ ಏಳಿಗೆಗೆ ಕಾರಣನಾದ ಈ ಪೃಥುಚಕ್ರವರ್ತಿಯನ್ನ ಜನರು ಭಗವಂತನೆಂದು ಕರೆದರು. ಇದು ಭಗವಂತನ ಆವೇಶಾವತಾರ. ಇಲ್ಲಿಯವರೆವಿಗೂ ನಾವು ಚಾಕ್ಷುಷ ಮನ್ವಂತರದವರೆಗಿನ ಅವತಾರಗಳನ್ನು ನೋಡಿದ್ದಾಯಿತು.  ಇನ್ನು ಮುಂದೆ ವೈವಸ್ವತ ಮನ್ವಂತರದಲ್ಲಿ ಆದ ಅವತಾರಗಳನ್ನು ನೋಡೋಣ.

ಹತ್ತನೇ ಅವತಾರ:

               ಮಾತ್ಸ್ಯಂ ಸ ಜಗೃಹೇ ರೂಪಂ ಚಾಕ್ಷುಷಾಂತರ ಸಂಪ್ಲವೇ |
               ನಾವ್ಯಾರೋಪ್ಯ ಮಹೀಮಯ್ಯಾಮಪಾದ್ವ್ಯೆವಸ್ವತಂ ಮನುಂ||   ಭಾಗವತ: 1-3-15


     ಇದು ಮತ್ಯಾವತಾರ  - ಹತ್ತನೇ ಅವತಾರ ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಮೊದಲನೇ ಅವತಾರ.
     ಒಂದು ಮನ್ವಂತರ ಮುಗಿದು ಅದರ ಮುಂದಿನ ಮನ್ವಂತರ ಪ್ರಾರಂಭವಾಗುವುದಕ್ಕೆ ಮುಂಚೆ ಒಂದು ಸಣ್ಣ ಪ್ರಳಯವಾಗುತ್ತದೆ. ಈ ಪ್ರಳಯದ ಅವಧಿ ಸುಮಾರು 1400 ವರ್ಷಗಳಿಂದ ಹಿಡಿದು 2000 ವರ್ಷಗಳು. ಈ ಅವಧಿಯಲ್ಲಿ ಭೂಮಿಯಮೇಲೆ ಜಲ ಪ್ರಳಯ ನಡೆಯುತ್ತಾ ಇರುತ್ತದೆ. ಆಗ ಭೂಮಿಯ ಬಹು ಭಾಗ ನಾಶವಾಗಿ ಹೋಗುತ್ತದೆ. ಭೂಮಿಯಮೇಲಿನ ಎಲ್ಲ ನಾಗರೀಕತೆ ಕೊಚ್ಚಿಹೋಗಿ , ಎಲ್ಲೋ ಒಂದು ಮೂಲೆಯಲ್ಲಿ  ಅಳಿದುಳಿದ ಜನರಿಂದ ಮುಂದಿನ ಮನ್ವಂತರ ಪ್ರಾರಂಭವಾಗುತ್ತದೆ. ಇದು ಪ್ರಕೃತಿಯು ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಕ್ರಮ. ಹೀಗಾಗದೇಹೋದರೆ, ಭೂಮಿಯಮೇಲೆ ವಾಸಮಾಡಲು ಜೀವಿಗಳಿಗೆ ಜಾಗವೇ ಇರುವುದಿಲ್ಲ.
     ಹೀಗೆ ಆರನೇ ಮನ್ವಂತರವಾದ ಚಾಕ್ಷುಷ ಮನ್ವಂತರ ಮುಗಿದು ಏಳನೇ ಮನ್ವಂತರವಾದ ವೈವಸ್ವತ ಮನ್ವಂತರ ಪ್ರಾರಂಭವಾಗುವುದಕ್ಕೆ ಮುಂಚೆ ನಡೆದ ಪ್ರಳಯದಲ್ಲಿ ಈ ಮತ್ಸ್ಯಾವತಾರವಾದದ್ದು. ಚಾಕ್ಷುಷ ಮನ್ವಂತರದ ಕೊನೆಯಲ್ಲಿ, ಒಂದು ದಿನ ಸೂರ್ಯನ ಪುತ್ರನಾದ ವೈವಸ್ವತಮನು ಸೂರ್ಯನಿಗೆ ಅಘ್ರ್ಯ ಕೊಡುತ್ತಿರುವ ಸಮಯದಲ್ಲಿ ಅವನ ಬೊಗಸೆಯಲ್ಲಿ ಒಂದು ಮೀನು ಕಂಡಿತು. ಅದನ್ನು ಅವನು ಅಘ್ರ್ಯಪಾತ್ರೆಗೆ ಹಾಕಿದ. ಆ ಪುಟ್ಟ ಮೀನು ಬೆಳೆದು ಆ ಪಾತ್ರೆಯ ತುಂಬ ತುಂಬಿತು. ಅದನ್ನು ತೆಗೆದುಕೊಂಡುಹೋಗಿ ಕೆರೆಯಲ್ಲಿ ಬಿಟ್ಟ. ಆ ಕೆರೆಯೂ ತುಂಬುವಷ್ಟು ದೊಡ್ಡಮೀನಾಗಿ ಬೆಳೆಯಿತು. ಸಮುದ್ರದಲ್ಲಿ ಬಿಟ್ಟ. ಅಲ್ಲಿಯೂ ಅದು ಮಹಾಮತ್ಸ್ಯವಾಗಿ ಸಮುದ್ರವನ್ನೆಲ್ಲ ತುಂಬಿತು. ಆ ಮೀನಿಗೆ ಒಂದು ಕೋಡು ಇತ್ತು. ಈ ಮನ್ವಂತರದ ಅಧಿಪತಿ ವೈವಸ್ವತಮನುವನ್ನು ರಕ್ಷಿಸುವುದಕ್ಕಾಗಿಯೇ ಭಗವಂತ ಮತ್ಸ್ಯರೂಪನಾಗಿ ಅವತರಿಸಿದ. ಭಗವಂತ ಯಾವುದೇರೂಪ ಧರಿಸಿದರು ಅದು ಅಪ್ರಾಕೃತರೂಪ. ಅದು ಜ್ಞಾನಾನಂದಮಯ. ಪಂಚಭೂತಗಳಿಂದಾದ ಶರೀರವಲ್ಲ ಎಂಬುದನ್ನು ಗಮನದಲ್ಲಿಡಬೇಕು. ಈ ರೂಪದಿಂದ  ಭಗವಂತ ವೈವಸ್ವತಮನುವನ್ನು ಆ ಪ್ರಳಯ ಜಲಧಿಯಲ್ಲಿ ಸಾಯದಂತೆ ರಕ್ಷಿಸಿ ಒಂದು ದೋಣಿಯಲ್ಲಿ ಕೂಡಿಸಿಕೊಂಡು , ಆ ದೋಣಿಯನ್ನು ತನ್ನ ಕೋಡಿಗೆ ಕಟ್ಟಿಕೊಂಡು ಆ ಪ್ರಳಯೋದಕದಿಂದ ಅವನನ್ನು ರಕ್ಷಿಸಿದ ಮತ್ತು ಅವನಿಗೆ ತತ್ವೋಪದೇಶಮಾಡಿ ಈಗಿನ ಮನ್ವಂತರದ ಅಧಿಪತಿಯನ್ನಾಗಿ ಮಾಡಿದ ಅವತಾರ. ಆ ಪ್ರಳಯದಲ್ಲಿ ಇದ್ದ ದೋಣಿ ಯಾವುದೆಂದರೆ, ಭೂಮಿಯೇ ಆ ದೋಣಿಯಾಗಿದ್ದಿತು. ಇದು ಹತ್ತನೇ ಅವತಾರ.

                                                               ಮುಂದುವರೆಯುವುದು.......


ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ
ವಿವೇಕಾನಂದನಗರ, ಹೊಸಪೇಟೆ.
 

Sunday, February 10, 2013

ಶ್ರೀ ಸಾದ್ವೀ ಶಿರೋಮಣಿ ತುರಡಗಿ ತಿಮ್ಮಮ್ಮನ ಚರಿತ್ರೆ

                              || ಶ್ರೀ ||
            
       ರಾಯಚೂರ ಜಿಲ್ಲಾ ಲಿಂಗಸಗೊರ ತಾಲೂಕಿನ ತುರಡಗಿ ಗ್ರಾಮದ ವೇದ ಸಂಪನ್ನರಾದ ನರಸಿಂಹಾಚಾರ್ಯ ಜೊಷಿ ಮತ್ತು  ಸೌ|| ಚಂದ್ರಲಾದೇವಿ ಎಂಬ ವಿಪ್ರೋತ್ತಮ ದಂಪತಿಗಳಲ್ಲಿ ಜನಿಸಿದ ಮಹಾನ ಪುತ್ರಿಯೆ ನಮ್ಮ" ತಿಮ್ಮಮ್ಮಾ". ಮನೆತನದ ಆರಾಧ್ಯ ದೆವನ ಹೆಸರನ್ನೇ ಇಟ್ಟಿದ್ದರಾದ್ದರಿಂದಾ ರೊಢಿಯಲ್ಲಿ ತಿಮ್ಮಮ್ಮಾ ಎಂದು ಕರೆಯುತ್ತಿದ್ದರು.
ಮನೆತನದ ಸಂಸ್ಕ್ರುತಿ, ಧಾರ್ಮಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಕಾರಣ ತಿಮ್ಮಮ್ಮನಲ್ಲಿ ಚಿಕ್ಕವಯಸ್ಸಿನಲ್ಲಿಯೇ ರಂಗೋಲಿ, ಹೆಣಿಕೆ, ಹಾಡು ಹಸೆಗಳು ಬಾಲ್ಯದಲ್ಲಿಯೇ ರೊಢಿಗತವಾಗಿದ್ದವು. ಮನೆತನದ ಕೆಲಸಗಳಲ್ಲಿ ಅಚ್ಚುಕಟ್ಟುತನ, ಒಪ್ಪ ಒರಣಗಳಿಂದಲೊ, ಚುರುಕುಮತಿಯಾಗಿರುವದಲ್ಲದೇ, ಪುರಾಣ, ಪ್ರವಚನೆಗಳಲ್ಲಿ ಹರಿಕಥಾಮ್ರುತಸಾರ, ದಾಸರ
ಪದಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದಳು.

           ಅಷ್ಟವರ್ಷಾತ್ವಿಯಂ ಕನ್ಯಾ ಪುತ್ರವತ್ಪಾಲಿತಾ ಮಯ ||
           ಎದಾನಿಂ ತವ ಪುತ್ರಾಯ ದತ್ತಾ ಸ್ನೇಹೇನ ಪಾಲ್ಯತಾಮ್ ||

       ವೈಧಿಕ ಧರ್ಮಕ್ಕನುಸರಿಸಿ ವೇದ ಸಂಪನ್ನರಾದ ನರಸಿಂಹಾಚಾರ್ಯರು ತಮ್ಮ ಮಗಳಾದ ತಿಮ್ಮಮ್ಮನನ್ನು ಎಂಟನೇ ವಯ್ಯಸ್ಸಿನಲ್ಲಿಏ ಸಮೀಪದ ಮುದ್ದಲಗುಂದಿ ಗ್ರಾಮದ ಕಂತ್ಸ ಗೋತ್ರ ಸಂಭವರಾದ ಶ್ರೀ ಮಾನ ವೆಂಕಟನರಸಿಂಹ ನಾಯಕ ಎಂಬವರ ಸುಪುತ್ರರಾದ ಚಿ|| ಅಶ್ವಥ ನಾಮಕ ವರಶ್ರೇಷ್ಟನಿಗೆ ಮದುವೆ ಮಾಡಿ ಕೊಟ್ಟರು.

       ಸೌ|| ತಿಮ್ಮಮ್ಮನವರು ೮ ವರ್ಷದ ಚಿಕ್ಕ ಹೆಣ್ಣು ಮಗಳಾಗಿದ್ದರೂ ಕೂಡಾ ತವರು ಮನೆಯಲ್ಲಿ ಉತ್ತಮ ಸಂಸ್ಕ್ರತಿಯಿಂದಾ ಬೆಳೆದವಳಾದ್ದರಿಂದಾ ಪತಿ, ಅತ್ತೆ, ಮಾವಂದಿರ ಸೇವೆಯನ್ನು ಭಕ್ತಿ ಪುರಸ್ಸರವಾಗಿ ಮಾಡುತ್ತಿದ್ದಳು.

ಪ್ರಾರಬ್ಧಕರ್ಮಣಾಂ ಭೋಗಾದೇವಕ್ಷಯ:

       ಸೌ||ತಿಮ್ಮಮ್ಮನು ಅತ್ತೆಯ ಮನೆಯಲ್ಲಿ ಪತಿಯ ಸೆವೆಯನ್ನು ಮಾಡುತ್ತಾ ಸದ್ ಗ್ರಹಿಣಿಯಾಗಿ ಏರಡು ವರುಷ ಕಳೆಯುವಷ್ಟರಲ್ಲಿ ಅಂದರೆ ಅವಳ (೧೦) ಹತ್ತನೆ ವಯದಲ್ಲಿ ಒಮ್ಮಿಂದೊಮ್ಮಿಲೆ ಪತಿದೆವರಾದ ಅಶ್ವತ್ಥರಾಯರು ವೈಕುಂಠವಾಸಿಗಳಾದರು ದೈವಿದುರ್ವಿಲಾಸದಿಂದಾ ತಿಮ್ಮಮ್ಮನಿಗೆ ವೈಧವ್ಯವು ಪ್ರಾಪ್ತವಾಯಿತು.
       ತಿಮ್ಮಮ್ಮನವರು ಬಾಲ್ಯದಿಂದಲೇ ಉಜ್ವಲವಾದ ಧಾರ್ಮಿಕ ಮನೋವ್ರತ್ತಿಯುಳ್ಳವರಾದ್ದರಿಂದಾ ಈ ಧು:ಖದಿಂದಾ ಲೋಕೋತ್ತರವಾದ ವೀರ ವೈರಾಗ್ಯವು ಆ ವೇಳೆಯಲ್ಲಿ ನಿರ್ಮಾಣವಾಯಿತು. ಇದರಿಂದಾ ತಮ್ಮ ಆಯುಷ್ಯವನ್ನೆಲ್ಲಾ ಶ್ರೀ ಹರಿಯ ಸೆವೆಯಲ್ಲಿಯೇ ಕಳೆಯಬೆಕೆಂದು ದ್ರುಡನಿಶ್ಚಯ ಮಾಡಿದರು.

       ಸ್ತ್ರೀಯರಿಗೆ ವೈಧವ್ಯವೆಂದರೆ ಸನ್ಯಾಸಾಶ್ರಮವೇ ಸರಿ! ಒಪ್ಪತ್ತು ಊಟ ಮಾಡುವದು, ಕಾಷಾಯ ವಸ್ತ್ರ ಧಾರಣೆ ಮಾಡುವದು, ಸದಾಕಾಲವೂ ಶ್ರೀ ಹರಿಯ ಧ್ಯಾನದಲ್ಲಿಯೇ ಮಗ್ನರಾಗಿರುವದು, ಇದೆ ರೀತಿಯ ನಿಯಮಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರು.
       ತಿಮ್ಮಮ್ಮನವರು ಮನೆ ಕೆಲಸಗಳನ್ನೆಲ್ಲಾ ಪರಮಾತ್ಮನ ಪೂಜೆಯಂದು ತಿಳಿದು ಭಕ್ತಿಯಿಂದಾ ಮಾಡುತ್ತಿದ್ದರು. ಆದರೆ ಪರಮ ಸಾದ್ವಿಯಾದ ಆತಿಮ್ಮಮ್ಮನ ದಿವ್ಯದ್ರುಷ್ಟಿಯು ಸಾಮಾನ್ಯರಾದ ಅವಳ ಅತ್ತೆ-ಮಾವಂದಿರಿಗೆ ತಿಳಿಯಲಿಲ್ಲಾ, ಮೆಲಾಗಿ ಚಿನಿವಾಲರು! ಕ್ರುಪಣರು, ಧನ ಸಂಗ್ರಹದಲ್ಲಿಯೇ ಮಗ್ನರಾದವರು. ಇಂಥವರು ದುರ್ದೈವಿಯಾದ ಈ
ಬಾಲವಿಧವೆಯನ್ನು ಕ್ರೂರತನದಿಂದಾ ಗೋಳಾಡಿಸತೊಡಗಿದರು.
       ಕುಲದೆವರಾದ ಕೊಪ್ಪರ ನ್ರುಸಿಂಹ ದೇವರ ಜಯಂತಿ ಉತ್ಸವಕ್ಕೆ ಪ್ರತಿವರುಷವು ಭಾಗವಹಿಸುವಾಗ ಅಲ್ಲಿ ದೇವದುರ್ಗದ ಸತ್ಪುರುಷ, ಭಗವದಭಕ್ತ ಸಿರೋಮಣಿ, ವೇದಮೂರ್ತಿ ಶ್ರೀ ಗಿರಿಯಪ್ಪನವರ ಪರಿಚಯವಾಯಿತು. ಹಾಗು ಅವರ ಪ್ರೌಢಿಮೆ, ವಾಕ್ಚಾತುರ್ಯ, ಪಾಂಡಿತ್ಯವನ್ನು ನೋಡಿ ಕೇಳಿ ಅವರ ಶಿಷ್ಯತ್ವವನ್ನು ವಹಿಸಿದಳು. ಆ ಸತ್ಪುರುಷರಿಗೂ
ಇವಳ ಭಕ್ತಿ, ವೈರಾಗ್ಯ, ಜ್ನಾನದಾಹವನ್ನು ತಿಳಿದುಕೊಂಡು ತಮ್ಮ ಮಗಳಂತೆಯೇ ಮಮತೆಯನ್ನು ತೋರಿ ತಮ್ಮ ಮನೆಯಲ್ಲಿಯೇ ಇರುವದಕ್ಕೆ ಅನುಕೊಲ ಮಾಡಿಕೊಟ್ಟರು.      
       ಪೊಜ್ಯ ಗಿರಿಯಪ್ಪನವರು ಪ್ರತಿ ವರುಷವೂ ಮೋತಂಪಲ್ಲಿ ಮುಖ್ಯಪ್ರಾಣದೆವರಿಗೂ, ತಿರುಪತಿ ತಿಮ್ಮಪ್ಪನಿಗೂ ಅವಿಚ್ಛಿನ್ನವಾಗಿ ಯಾತ್ರಾ ಕಾರ್ಯವನ್ನು ನೆರವೇರಿಸಿಕೊಂಡು ಬಂದಿದ್ದರಲ್ಲದೆ, ಆಯಾ ಕ್ಷೇತ್ರದಲ್ಲಿ ನೆರೆದ ಜನರಿಗೆ ಜ್ನಾನೋಪದೆಶವನ್ನು ಮಾಡುತ್ತಿದ್ದರು. ಭಗವದ್ಭಕ್ತಳಾದ ತಿಮ್ಮಮ್ಮನೊಕೊಡಾ ನಿರಂತರವಾಗಿ ಅವರ ಜೊತೆಗೆ ಹರಿ
ವಾಯುಗಳ ದರುಶನ, ಭಕ್ತರ ಸೆವೆ, ಪುರಾಣ ಪುಣ್ಯಕಥೆಗಳ ಶ್ರವಣವನ್ನು ಶ್ರದ್ಧೆಯಿಂದಾ ಮಾಡುತ್ತಿದ್ದಳು. ಇದೇರಿತಿಯಾಗಿ ಅಖಂಡ (೨೦) ಇಪ್ಪತ್ತು ವರುಷಗಳ ಸೇವೆಯಫಲವಾಗಿ ತಿಮ್ಮಮ್ಮನಲ್ಲಿ ಇದ್ದ ಜ್ನಾನ, ಭಕ್ತಿ, ವೈರಾಗ್ಯಗಳು ಇನ್ನೂ ಜಾಗ್ರತಗೊಂಡು ಗಟ್ಟಿಗೊಂಡವು.

       ಈ ರೀತಿ ನಡೆಯುತ್ತಿರುವಾಗ ಒಂದು ದಿವಸ ಗುರುಗಳ ಸನ್ನಿಧಿಯಲ್ಲಿ ತಿಮ್ಮಮ್ಮನವರು ವಿನಯಪೊರ್ವಕವಾಗಿ, "ತಾವು ಇಂದಿನವರೆಗೆ (೨೦)ಇಪ್ಪತ್ತು ವರುಷಗಳ ತನಕ ಪಿಪಿಲಿಕಾಮಾರ್ಗದಿಂದಾ ನನಗೆ ಕ್ರಮಕ್ರಮೇಣ ಜ್ನಾನೋಪದೇಶ ಮಾಡುತ್ತಾ ನನ್ನನ್ನು ವಿಹಂಗಮ ಮಾರ್ಗಕ್ಕೆ ತಂದು ಮುಟ್ಟಿಸಿದ್ದೀರಿ, ಈ ಮಾರ್ಗವು
ಸದ್ಯೋಮುಕ್ತಿಪ್ರದವಾಗಿದೆ. ತಮ್ಮ ಜ್ನಾನೋಪದೇಶದಿಂದ ನಾನು ಧನ್ಯಳಾದೆ, ಇನ್ನುಮೇಲೆ ನಮ್ಮ ನಾಡಿಗೆ ಹೋಗಿ ಹೊನೊರ ಗ್ರಾಮದಲ್ಲಿ ವಾಸಮಾಡಿ ತಾವು ಹೇಳಿದ ಉಪದೇಶಾಮ್ರುತವನ್ನು ಆ ನಾಡಿನಲ್ಲಿ ಬಿತ್ತರಿಸಬೇಕೆಂದಿದ್ದೇನೆ" ಅಪ್ಪಣೆಯಾಗಬೇಕು, ಏಂದು ಭಿನ್ನವಿಸಿಕೊಂಡಳು. ಸತ್ಪುರುಷರು "ಹಾಗೆ ಆಗಲಿ" ಏಂದು ಆಜ್ನೇಮಾಡಿದರು.
       ಆ ಬಳಿಕ ಅಮ್ಮನವರು ಪ್ರಸನ್ನ ಚಿತ್ತದಿಂದಾ ಹೊನೊರಿಗೆ ಬಂದು ಊರಮುಂದಿನ ಹಳ್ಳದ ದಂಡೆಯಮೆಲಿರುವ ನಿಸರ್ಗ ಮನೊಹರವಾದ ಶ್ರೀ ಮಾರುತಿ ದೇವಾಲಯವನ್ನು ತಮ್ಮ ಆಶ್ರಮ ಸ್ತಾನವನ್ನಾಗಿ ಮಾಡಿಕೊಂಡು ಅಲ್ಲಿಯೇ ಇರಲಾರಂಭಿಸಿದರು. ಮೊಟ್ಟಮೊದಲು ಸಿರಗುಪ್ಪಿ ಗ್ರಾಮದ ವೆ|| ಮೊ|| ಅಕ್ಷತೇ ಹನುಮಂತಾಚಾರ್ಯ ಎಂಬ ಸದ
ಬ್ರಾಹ್ಮಣ ಇವರ ಶಿಷ್ಯತ್ವವನ್ನು ವಹಿಸಿಕೊಂಡನು. ನಿತ್ಯವೂ ನರಸಿಂಹದೇವರು, ಮುಖ್ಯಪ್ರಾಣ, ಮ್ರುತ್ತಿಕಾ ವ್ರುಂದಾವನ ಗಳ ಪೋಜೆಯನ್ನು ಮಾಡಿ ನೈವಿದ್ಯ, ವೈಶ್ವದೆವ, ಹಸ್ತೊದಕ,ಗಳನ್ನು ಮಾಡಿ. ಅಮ್ಮನವರಿಗೂ, ಅಥಿತಿ ಅಭ್ಯಾಗತರಿಗೂ ತೀರ್ಥವನ್ನು ಕೊಡುತ್ತಿದ್ದರು. ಅಮ್ಮನವರ ದರ್ಶನ ಹಾಗು ಉಪದೇಶಾಮ್ರುತವನ್ನು ಕೇಳಲು ನಾಲ್ಕೂ ವರ್ಣಗಳ
ಸದ್ ಗ್ರಹಿಣಿ, ಗ್ರಹಸ್ತರು ನಿತ್ಯವೂ ಆಶ್ರಮಕ್ಕೆ ಆಗಮಿಸುತ್ತಿದ್ದರು. ಆಶ್ರಮದಲ್ಲಿ ನಿತ್ಯವೂ ಅನ್ನದಾನಕ್ಕೆ ಎಳ್ಳಷ್ಟೂ ಕೊರತೆಯಿರುತ್ತಿರಲಿಲ್ಲಾ. ಆದರೂ ಅಮ್ಮನವರು ಮಾತ್ರ ಅಯಾಚಿತ ವ್ರುತ್ತಿಯಿಂದಲೇ ಇರುತ್ತಿದ್ದರು.
       ಹೂನೂರಿಗೆ ಬಂದನಂತರವೂ ಪ್ರತಿವರುಷ ಯಥಾಪ್ರಕಾರವಾಗಿ ತಿರುಪತಿ ಯಾತ್ರೆಯನ್ನು ಮಾಡುತ್ತಿದ್ದರು. ವಿಶೇಷವೆಂದರೆ ಈಗ ಇವರ ಜೊತೆಯಲ್ಲಿ ನೊರಾರು ಜನ ಬ್ರಾಹ್ಮಣರು ಕುಟುಂಬ ಸಮೇತರಾಗಿ ಯಾತ್ರೆಗೆ ಹೋಗಿ ಬರುತ್ತಿದ್ದರು. ಎಲ್ಲ ಜನರ ಯೋಗಕ್ಷೇಮವನ್ನು ಅಮ್ಮನವರೇ ನೋಡಿಕೊಳ್ಳುತ್ತಿದ್ದರು.

       ಈ ರೀತಿಯಾಗಿ ನಡಿದು ಬಂದ ಯಾತ್ರಾ ಸಮಯದಲ್ಲಿ ಒಂದು ವರುಷ ಭೀಕರ ಬರಗಾಲ ಪ್ರಾಪ್ತವಾಯಿತು. ಆದರೂ ಎದೆಗುಂದದೇ ಯಾತ್ರಾ ಪ್ರಾರಂಭ ಮಾಡಿದರು. ಒಂದು ಪ್ರಾತ:ಕ್ಕಾಲದಲ್ಲಿ ಹನುಮಂತಾಚಾರ್ಯರು ನಿತ್ಯದಂತೆಪ್ರಾತ:ಕಾಲದಲ್ಲಿ ಭಾವಿಗೆ ಸ್ನಾನಕ್ಕೆಂದು ಹೊದರು, ಸೊಂಟಕ್ಕೆ ಕಟ್ಟಿಕೊಂಡ ದುಡ್ಡಿನ ಗಂಟನ್ನು ದಂಡೆಯ
ಮೆಲಿಟ್ಟು ಸ್ನಾನ ಮಾಡಿ ಲಗುಬಗೆಯಿಂದಾ ನಿರನ್ನು ತುಂಬಿಕೊಂಡು ಬಂದುಬಿಟ್ಟರು. ಗುಡಿಯಲ್ಲಿ ಕುಳಿತು ನಿತ್ಯಾನ್ಹೇಕಗಳನ್ನು ಮುಗಿಸಿದ ನಂತರ ಅವರಿಗೆ ದುಡ್ಡಿನ ನೆನಪಾಯಿತು. ತಕ್ಷಣವೇ ಓಡಿಹೊಗಿ ನೋಡುತ್ತರೆ ಹಣ ಅಲ್ಲಿ ಎಲ್ಲವಾಗಿತ್ತು. ಇನ್ನು ಅಮ್ಮನಿಗೆ ಹೇಗೆ ಮುಖ ತೊರಿಸುವದೆಂದು (ಅದು ಭಕ್ತರಿಂದಾ ಬಂದಹಣ) ಭೀತಿಯಿಂದಾ ಗುಡಿಗೆಬಂದು
ಯೋಚನಾ ಮಗ್ನನಾಗಿ ಕುಳಿತುಬಿಟ್ಟನು. ಅಪರಾದಿಯಂತೆ ಕುಳಿತ ಹನುಮಂತಾಚಾರ್ಯರನ್ನು ನೋಡಿದ ಅಮ್ಮನವರು "ಏನಪ್ಪಾ ಹನುಮಪ್ಪಾ ಬಹಳ ಬೇಸತ್ತಿಯೇನಪ್ಪಾ" ಸುಮ್ಮನೇ ಕುಳಿತಿರುವೆ,? ಏಂದು ಕೆಳೀದರು.

                                              ಮುಂದುವರೆಯುವದು.......
 
ಸಂಗ್ರಹ -
ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ.
ಹುಬ್ಬಳ್ಳಿ.
9448215151

Friday, February 8, 2013

ದಾಸಶ್ರೇಷ್ಠ ಶ್ರೀ ಪುರಂದರದಾಸರು


ದಾಸಶ್ರೇಷ್ಠ ಶ್ರೀ ಪುರಂದರದಾಸರು

        ಮನ್ಮನೋqಭೀಷ್ಟವರದಂ ಸರ್ವಾಭೀಷ್ಟಫಲಪ್ರದಂ |
        ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||
    
ಅಪೌರುಷೇಯವಾದ ವೇದಗಳು ಜನಸಾಮಾನ್ಯರ ಮನವನ್ನು ಮುಟ್ಟುವಲ್ಲಿ ಸಮರ್ಥವಾಗಲಿಲ್ಲ ಕಾರಣ ಅವು ಸಂಸ್ಕೃತ ಭಾಷೆಯಲ್ಲಿದ್ದುದರಿಂದ ಜನಸಾಮಾನ್ಯರಿಗೆ ಅವುಗಳ ಮಹತ್ವ ಗೊತ್ತಾಗಲಿಲ್ಲ. ಏಕೆಂದರೆ ಸಂಸ್ಕೃತ ಅವರ ಆಡುಭಾಷೆಯಾಗಿರಲಿಲ್ಲ. ಹೀಗಾಗಿ ಕರ್ಣೋಪಕರ್ಣವಾಗಿ ಈ ವೇದ, ಉಪನಿಷತ್ತುಗಳನ್ನು ಕಥೆಗಳ ರೂಪದಲ್ಲಿ ಹೇಳಲು ರಾಮಾಯಣ, ಮಹಾಭಾರತಗಳು ಹುಟ್ಟಿಕೊಂಡವು. ಇದಲ್ಲದೇ ಕಥೆಗಳ ರೂಪದಲ್ಲಿ ಹೇಳುವುದರಿಂದ ಜನ ಸಾಮಾನ್ಯರಲ್ಲಿ ಆಸಕ್ತಿ, ಅಭಿರುಚಿಗಳನ್ನು ಬೆಳೆಸಲು ಸಾಧ್ಯವಾಯಿತು. ಇದನ್ನೇ ಹಾಡಿನ ರೂಪದಲ್ಲಿ ಪ್ರಕಟ ಪಡಿಸಿದವರು ನಮ್ಮ ವೈದಿಕ ಸಾಹಿತ್ಯ ಪರಂಪರೆಯನ್ನು ದಾಸ ಸಾಹಿತ್ಯದ ಮೂಲಕ ಬೆಳಗಿದ ದಾಸವರೇಣ್ಯರು. ಇವರಲ್ಲಿ ಪ್ರಮುಖರಾದವರೆಂದರೆ ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಮಹಿಪತಿದಾಸರು. ಇವರೆಲ್ಲರೂ ಕೀರ್ತನ ರೂಪದಲ್ಲಿ ನಾಮಸ್ಮರಣೆಯನ್ನು ಮಾಡಿ ಭಗವಂತನ ಕೃಪೆಗೆ ಪಾತ್ರರಾದವರು.

    ದಾಸಪರಂಪರೆಯಲ್ಲಿ ೧೩ಶತಮಾನದ ಕೊನೆಯಲ್ಲಿದ್ದ ಶ್ರೀನರಹರಿತೀರ್ಥರು ದಾಸ ಕೂಟದ ಮೂಲಪುರುಷರು. ಆನಂತರ ಶ್ರೀಪಾದರಾಜರು, ಶ್ರೀವ್ಯಾಸರಾಯರು, ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯದಾಸರು, ಶ್ರೀಗೋಪಾಸದಾಸರು, ಶ್ರೀಜಗನ್ನಾಥದಾಸರು ಮೊದಲಾದ ದಾಸಶ್ರೇಷ್ಠರು ಕನ್ನಡನಾಡಿನಲ್ಲಿ ಉದಯಿಸಿ ಜನಸಾಮಾನ್ಯರಲ್ಲಿ ನೀತಿ, ಸದಾಚಾರಗಳನ್ನು ಬೆಳೆಸಿದರು. ಸುಲಭವೂ, ಸರಳವೂ ಆದ ಕೀರ್ತನೆಗಳ ಮೂಲಕ ಭಕ್ತಿ ಹಾಗೂ ಪರಮಾತ್ಮನ ವಿಷಯಗಳನ್ನು ಪ್ರಸಾರಮಾಡಿದರು. ಅಲ್ಲದೇ ತಾವೇ ಸ್ವತಃ ಜನ ಸಾಮಾನ್ಯರ ಮನೆ- ಮನೆಗೆ ಹೋಗಿ ಸರಳ ಕನ್ನಡದಲ್ಲಿ ದೇವರ ನಾಮಗಳನ್ನು ಹಾಡಿ, ಸಂಗೀತ ಹಾಗೂ ಸಾಹಿತ್ಯದ ಮೂಲಕ ಜನಸಾಮಾನ್ಯರ ಮನಸೂರೆಗೊಂಡು, ಅವರ ಉದ್ಧಾರಕಾರ್ಯದಲ್ಲಿ ತೊಡಗಿದರು.

    ಈ ದಾಸವರೇಣ್ಯರಲ್ಲಿ ಮೊಟ್ಟಮೊದಲಿಗರೆಂದರೆ ಶ್ರೀಪುರಂದರದಾಸರು. ಪುರಂದರದಾಸರು ಕ್ರಿ.ಶ. ೧೪೮೪ರಲ್ಲಿ ಪುರಂದರಗಡದಲ್ಲಿ ಜನಿಸಿದರು. ಚಿನಿವಾರವೃತ್ತಿಯನ್ನು ಮಾಡುತ್ತಿದ್ದ ವರದಪ್ಪನಾಯಕನ ಮಗನಾಗಿ ಜನಿಸಿದ ಪುರಂದರದಾಸರ ಮೂಲ ಹೆಸರು ಶ್ರೀನಿವಾಸನಾಯಕನೆಂದು. ಶ್ರೀನಿವಾಸನ ದಯದಿಂದ ಜನಿಸಿದ ಶ್ರೀನಿವಾಸನಾಯಕರ ಸ್ವಭಾವ ಅತಿ ಜಿಪುಣತನ. ಶ್ರೀನಿವಾಸನಾಯಕನು ಪುರಂದರದಾಸನಾದದ್ದು ಶ್ರೀನಿವಾಸನಿಂದಲೇ. ಇದಕ್ಕೆ ಕಾರಣಕರ್ತರೆಂದರೆ ನಾಯಕರ ಪತ್ನಿ ಸರಸ್ವತಿಬಾಯಿ.

    ಶ್ರೀನಿವಾಸನಾಯಕರ ಗುರುಗಳು ಶ್ರೀ ವ್ಯಾಸರಾಯರು. ಗುರುಗಳಿಂದ ಪುರಂದರ ವಿಠಲ ಎನ್ನುವ ಅಂಕಿತವನ್ನು ಪಡೆದ ದಾಸವೃತ್ತಿಯನ್ನು ಹೊಂದಿದ ದಾಸರು ತಮ್ಮ ಸರ್ವಸ್ವನ್ನು ದಾನ ಮಾಡಿ ಹರಿದಾಸರಾದರು. ಸಂಸಾರ ಬಂಧನದಿಂದ ಹೊರಬಂದು ಬೀದಿ ಬೀದಿಗಳಲ್ಲಿ ಹರಿಭಜನೆ ಮಾಡುತ್ತಾ ಸಾಗಿದರು. ಮಕ್ಕಳಿಂದ ವೃದ್ಧವರೆಗೂ ಅವರ ಮನಸ್ಸನ್ನು ಸೂರೆಗೊಂಡ ದಾಸರು ಭಕ್ತಿಯ ಪ್ರವಾಹದಲ್ಲಿ ಅವರನ್ನು ಮುಳುಗಿಸುವುದರ ಮೂಲಕ ಅವರಿಗೆ ಭಗವಂತನ ಸಾನಿಧ್ಯವನ್ನು ಸೇರುವ ದಾರಿಯನ್ನು ತೋರಿಸಿಕೊಟ್ಟರು. ಪುರಂದರವಿಠಲ ಎನ್ನುವ ಅಂಕಿತದೊಡನೆ ದಾಸರು ಸುಮಾರು ೪,೭೫,೦೦೦ ಪದ, ಪದ್ಯ, ಸುಳಾದಿಗಳನ್ನು ರಚಿಸಿದ್ದಾರೆ.
ದಾಸರೆಂದರೆ ಪುರಂದರದಾಸರಯ್ಯ.

    ಲೌಕಿಕ ಐಶ್ವರ್ಯ, ಭೋಗಗಳ ನಿಸ್ಸಾರತೆಯನ್ನು ದಾಸರು ತಮ್ಮ ಅನೇಕ ಹಾಡುಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ‘ದಾಸರೆಂದರೆ ಪುರಂದರದಾಸರಯ್ಯ‘ ಎಂದು ತಮ್ಮ ಗುರುಗಳಿಂದಲೇ ಪ್ರಶಂಸೆಯನ್ನು ಪಡೆದ ದಾಸರು ‘ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ, ಕುದುರೆ, ಒಂಟೆ ಎಲ್ಲಾ ಲೊಳಲೊಟ್ಟೆ ಎಂದೂ, ‘ನೆಚ್ಚದಿರಿ ಭಾಗ್ಯ ಸ್ಥಿರವಲ್ಲವೀ ದೇಹ‘ ಎಂದು ಸಾರಿದ್ದಾರೆ. ಜಗತ್ತು ನಶ್ವರವಾಗುವದರ ಜೊತೆಗೆ ಚಿಂತೆಯ ಬೀಡೂ ಆಗಿದೆ. ಅನುಗಾಲವೂ ಚಿಂತೆ ಜೀವಕ್ಕೆ, ಸತಿಯು ಇದ್ದರೆ ಚಿಂತೆ, ಸತಿಯು ಇಲ್ಲದಿರೆ ಚಿಂತೆ, ಈ ಚಿಂತೆಗಳಿಂದ ಕೂಡಿದ ಇಂತಹ ಜಗತ್ತಿನಲ್ಲಿ ಮನುಷ್ಯರು ಇಂದ್ರಿಯಗಳ ಸೆಳೆತಕ್ಕೆ ಸಿಕ್ಕು ಪರಮಾತ್ಮನನ್ನು ಮರೆಯುತ್ತಾರೆ. ಈ ಸಂಸಾರ ಚಕ್ರದಿಂದ ಬಿಡುಗಡೆ ಹೊಂದುವ ಪ್ರಯತ್ನವನ್ನು ಮಾತ್ರ ಮಾಡುವುದಿಲ್ಲ. ಕ್ಷಣಭಂಗುರವಾದ ದೇಹವನ್ನು ನಂಬಿ, ಅದರ ಅಲಂಕಾರ, ಭೋಗ ಮತ್ತು ಯೋಗ ಕ್ಷೇಮದಲ್ಲಿಯೇ ತನ್ನ ಅಮೂಲ್ಯವಾದ ಆಯುಷ್ಯವನ್ನು ಕಳೆಯುತ್ತಾನೆ. ಅದರ ಬದಲು ಮಾನವನು ತನ್ನ ದೇಹವನ್ನು ಮುಕ್ತಿಯ ಸಾಧನವನ್ನಾಗಿ ಮಾಡಿಕೊಳ್ಳಬೇಕು. ಮಾನವ ಜನ್ಮ ದೊಡ್ಡ ದು | ಇದನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ‘ ‘ದಾಳಿ ಬರುವ ಮುನ್ನಾ ಧರ್ಮ ಗಳಿಸೊ||‘ ಎಂದು ಉಪದೇಶಿಸಿದ್ದಾರೆ. ಹಾಗಾದರೆ ಧರ್ಮವನ್ನು ಗಳಿಸುವುದು ಹೇಗೆ? ವ್ಯಕ್ತಿಯ ಉದ್ಧಾರ ಹೇಗೆ? ಎನ್ನುವ ಪ್ರಶ್ನೆ ಬಂದರೆ, ಇದಕ್ಕಾಗಿ ಪರಮಾತ್ಮನನ್ನು ನಂಬಿ, ಎಲ್ಲವನ್ನೂ ಅವನಿಗೆ ಅರ್ಪಿಸಬೇಕು. ಆತನನ್ನು ನಂಬಿ ಕೆಟ್ಟವರಿಲ್ಲ ಎಂದು ನಂಬಿರುವ ದಾಸರು ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೇ ಕೆಟ್ಟರೆ ಕೆಡಲಿ |‘ ಎಂದು ಹಾಡಿರುವ ದಾಸರು ಈ ನಂಬಿಕೆ ಅಥವಾ ಭಕ್ತಿಯ ಸಾಧನಗಳಲ್ಲಿ ಅತ್ಯಂತ ಮಹತ್ವದ್ದು ಭಗವಂತನ ನಾಮಸ್ಮರಣೆ. ಅದನ್ನು ನಿರಂತರವಾಗಿ ಮಾಡುತ್ತಿರಬೇಕೆಂದು ಈ ಪದ್ಯದಲ್ಲಿ ಹೀಗೆ ತಿಳಿಸುತ್ತಿದ್ದಾರೆ ‘ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ‘ ಎಂದ ದಾಸರು ಪುನಃ ತಮ್ಮ ಒಂದು ಹಾಡಿನಲ್ಲಿ ‘ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ |‘ ಎಂದಿದ್ದಾರೆ. ಹಾಗೂ ‘ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲ ಒಂದಿದ್ದರೆ ಸಾಕೋ | ಎಂದು ವ್ಯಕ್ತಿ(ನಾಮಿ)ಗಿಂತ ನಾಮವೇ ಶ್ರೇಷ್ಠವೆಂದು ಪ್ರತಿಪಾದಿಸಿದ್ದಾರೆ.

    ಇಂತಹ ಹರಿನಾಮ ಸುಧೆಯು ಮನಸ್ಸಿನಲ್ಲಿ ಸದಾ ನೆಲೆಸಿರಬೇಕಾದರೆ ಮನಸ್ಸು ನಿರ್ಮಲ ವಾಗಿರಬೇಕಾದ್ದು ಅತೀ ಅವಶ್ಯ. ಆದಕಾರಣ ದಾಸರು ಕಾಮ, ಕ್ರೋಧಾದಿ ಷಡ್ರಿಪುಗಳನ್ನು ಜಯಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಒಂದೆಡೆ ಅವರು ‘ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯಾ |‘ ಎಂದು ಭೋಧಿಸಿದ್ದಾರೆ. "ಕಾಗದ ಬಂದಿದೆ" ಎಂಬ ಕೀರ್ತನೆಯಲ್ಲಿ ಕಮಲನಾಭನ ಭಕ್ತರಿಗೆಲ್ಲ ಕಾಗದ ಬಂದಂತೆ ಕಲ್ಪಿಸಿ ಎಲ್ಲರನ್ನೂ ಎಚ್ಚರಿಸಿದ್ದಾರೆ. ದಾಸರ ಅಭಿಪ್ರಾಯದ ಪ್ರಕಾರ ವೈರಾಗ್ಯವೆಂದರೆ ಮನೆ-ಮಾರು ಬಿಟ್ಟು, ಹೆಂಡತಿ-ಮಕ್ಕಳನ್ನು ತ್ಯಜಿಸಿ ಅಡವಿಗೆ ಹೋಗುವುದಲ್ಲ. ಭಕ್ತನು ಗೃಹಸ್ಥನಾಗಿದ್ದುಕೊಂಡೇ ಮುಕ್ತಿಯ ಮಾರ್ಗವನ್ನು ಹೊಂದಬೇಕು ಎಂದು ತಿಳಿಸಿ ಹೇಳಿದ್ದಾರೆ. ಪ್ರಪಂಚದಲ್ಲಿ ಇದ್ದೂ ಇಲ್ಲದಂತೆ ನಿರ್ಲಿಪ್ತನಾಗಿ ಜೀವಿಸಬೇಕೆಂದು ಉಪದೇಶಿಸುವ ದಾಸರು ಜನತೆಗೆ ಕೇವಲ ನಿವೃತ್ತಿ ಮಾರ್ಗವನ್ನು ಬೋಧಿಸದೇ ಪ್ರವೃತ್ತಿ ಮಾರ್ಗವನ್ನೂ ಬೋಧಿಸಿದ್ದಾರೆ. ಸರ್ವವ್ಯಾಪಿ ಹಾಗೂ ಸರ್ವರಕ್ಷಕನಾದ ಪರಮಾತ್ಮನಲ್ಲಿ ಧೃಡನಂಬಿಕೆ ಇಟ್ಟು ಸಂಸಾರದಲ್ಲಿ ಬರುವ ನಷ್ಟಗಳನ್ನು ಅನುಭವಿಸಬೇಕು. ಎಂತಹ ಕಷ್ಟಕಾಲದಲ್ಲಿಯೂ ಅಧೈರ್ಯ ಹೊಂದದೇ "ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ" ಎಂದು ಜೀವನದಲ್ಲಿ ಮುಂದೆ ಸಾಗಬೇಕು. ಈ ಸಂಸಾರವೆಂಬ ಮಹಾಸಾಗರದಲ್ಲಿ ದೊಡ್ಡ ಅಲೆಗಳು ಬಂದಾಗ ‘ಈಸಬೇಕು ಇದ್ದು ಜೈಸಬೇಕು‘ ಎಂದಿದ್ದಾರೆ. ಮತ್ತೊಂದೆಡೆ ‘ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ, ಬಿಲ್ಲಾಗಿ ಇರಬೇಕು ಬಲ್ಲವರೊಳಗೆ |‘ ಎಂದು ಕಾವ್ಯಮಯವಾಗಿ ಜನತೆಗೆ ದಿವ್ಯ ಸಂದೇಶ ನೀಡಿದ್ದಾರೆ.
    ಡಾಂಭಿಕ ಭಕ್ತಿಯನ್ನು ಕಟುವಾಗಿ ಟೀಕಿಸುವ ದಾಸರು ಲೋಕದ ಡಾಂಭಿಕತೆಯನ್ನು, ಆತ್ಮವಂಚನೆಯನ್ನು ಕಂಡು ನಗುತ್ತಾ, ಅದನ್ನು ವಿಡಂಬಡಿಸುತ್ತಾ ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ |‘ ಎಂದು ಹಾಡಿ, ಧರ್ಮದ ಬಾಹ್ಯ ಆಚರಣೆಗಿಂತ ಅಂತಃಕರಣ ಶುದ್ಧಿ ಮತ್ತು ಸದಾಚಾರಗಳು ತುಂಬಿರಬೇಕೆಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ಸಿದ್ಧಾಂತಗಳನ್ನು ಸುಂದರವಾಗಿ ಪ್ರತಿಪಾದಿಸಿರುವ ದಾಸರು ವಿಶಾಲವಾದ ಮಾನವ ಧರ್ಮವನ್ನು ಸುಂದರವಾಗಿ ಬೋಧಿಸಿದ್ದಾರೆ. ಅತ್ಯುಚ್ಚವಾದ ಪ್ರೀತಿತತ್ವದ, ಅಹಿಂಸಾಧರ್ಮದ ಬೋಧೆಯನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ‘ಧರ್ಮವೇ ಜಯವೆಂಬ ದಿವ್ಯಮಂತ್ರ‘ ಎನ್ನುವ ಪದದಲ್ಲಿ ತಿಳಿಸಿದ್ದಾರೆ. ಅಲ್ಲದೇ ‘ವಿಷವಿಕ್ಕಿದವಗೆ ಷಡ್ರಸವನೀಯಲುಬೇಕು | ದ್ವೇಷ ಮಾಡಿದವನ ಪೋಷಿಸಲುಬೇಕು | ಮೋಸ ಮಾಡಿದವನ ಹೆಸರು ಮಗನಿಗಿಡಬೇಕು | ಹುಸಿಯಾಡಿ ಕೆಡಿಸುವವನ ಹಾಡಿ ಹರಸಲುಬೇಕು ||‘ ಎಂದು ಹಾಡಿರುವ ದಾಸರು ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ, ವಿಷಕ್ಕೆ ಪ್ರತಿಯಾಗಿ ಅಮೃತ ಇವುಗಳನ್ನು ನೀಡುವುದೇ ಉದಾತ್ತವಾದ ಮಾನವ ಧರ್ಮ ಎಂದು ಜನತೆಗೆ ದಿವ್ಯಸಂದೇಶವನ್ನು ನೀಡಿದ್ದಾರೆ.
    ‘ಮಾನವ ಜನ್ಮ ದೊಡ್ಡದು, ಇದನು ಹಾನಿ ಮಾಡಲು ಬೇಡಿ, ಹುಚ್ಚಪ್ಪಗಳಿರಾ ||‘ ಎಂದು ಆರಂಭಿಸಿ ಮಾನವ ಜನ್ಮದ ಸಾಫಲ್ಯತೆಯನ್ನು ಪಡೆಯಲು ಈ ನರಜನ್ಮದಿಂದ ಮಾತ್ರ ಸಾಧ್ಯ. ಈ ನರಜನ್ಮದಲ್ಲಿ ಮಾತ್ರ ಸಾಧನೆ ಮಾಡುವುದರ ಮೂಲಕ ಭಗವಂತನ ಸಾನಿಧ್ಯವನ್ನು ಹೊಂದಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಧರ್ಮ ಜ್ಯೋತಿಯ ಸಂಕೇತ, ಧರ್ಮ ಬೆಳಕಿನ ಸಂಕೇತ, ಧರ್ಮ ಜ್ಞಾನದ ಸಂಕೇತ, ಧರ್ಮ ಉನ್ನತಿಯ ಸಂಕೇತ ಎಂಬುದನ್ನು ಸೂಚ್ಯವಾಗಿ ದಾಸರು ಮನದಟ್ಟು ಮಾಡಿಕೊಟ್ಟಿದ್ದಾರಲ್ಲದೇ ನಮ್ಮ ಸಾಮಾಜಿಕ ಜೀವನದಲ್ಲಿಯ ಲೋಪದೋಷಗಳನ್ನು ಎತ್ತಿ ತೋರಿಸಿ, ಅವುಗಳನ್ನು ಪರಿಹರಿಸುವ ಮಾರ್ಗವನ್ನು ಕೂಡಾ ಸೂಚಿಸಿದ್ದಾರೆ. ನಮ್ಮ ಮನಸ್ಸಿನಲ್ಲಿಯ ಕಲ್ಮಷಗಳನ್ನು ಹೋಗಲಾಡಿಸಿ, ಶ್ರೀಹರಿಯ ಪಾದವನ್ನು ಸೇರಬಯಸುವ ಪ್ರತಿಯೊಬ್ಬ ವ್ಯಕ್ತಿ ಪರಮಾತ್ಮನ ಗಾನಾಮೃತವನ್ನು ಸವಿಯಬೇಕೆಂದು ಮಾರ್ಮಿಕವಾಗಿ ತಿಳಿಸಿಕೊಟ್ಟಿದ್ದಾರೆ.

    ಮನುಷ್ಯನು ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಎನ್ನುವ ವೈರಿಗಳನ್ನು ಮೊದಲು ನಿಗ್ರಹಿಸಬೇಕು. ಇದಕ್ಕಾಗಿ ಹಗಲಿರುಳು ಭಗವಂತನ ಧ್ಯಾನವನ್ನು ಮಾಡಬೇಕು. ದೇವರನ್ನು ಕುರಿತು ಚಿಂತಿಸಬೇಕು. ಎನ್ನುವ ದಾಸರು ‘ಸಂಸಾರದಲ್ಲಿ ಈಸಬೇಕು, ಇದ್ದು ಜೈಸಬೇಕು‘ ಎಂದು ನುಡಿದಿದ್ದಾರೆ. ಇದರರ್ಥವೇನೆಂದರೆ ಮರಣವು ನಮ್ಮ ಸಮಸ್ಯೆಗಳಿಗೆ ಉತ್ತರವಲ್ಲ, ಅದನ್ನು ಪರಿಹರಿಸಬೇಕಾದರೆ ಸಂಸಾರಸಾಗರದ ಸಿಹಿ-ಕಹಿಗಳನ್ನು ಉಂಡು, ಅವುಗಳನ್ನು ನಿಗ್ರಹಿಸಿಕೊಳ್ಳಬೇಕೆಂದು ನುಡಿದಿದ್ದಾರೆ. ಏಕೆಂದರೆ ಸುಖದ ಸಂತಾನಗಳಾದ ಅಹಂಕಾರ, ವ್ಯಸನ, ಪ್ರತಿಷ್ಠೆಗಳನ್ನು ಮೊದಲು ಬಿಡಬೇಕು. ಏಕೆಂದರೆ ದುಃಖವೇ ಸುಖಕ್ಕೆ ಕಾರಣ. ದುಃಖವನ್ನು ಅನುಭವಿಸಿದವರಿಗೆ ಸುಖದ ಬೆಲೆ ಅರಿವಾಗುವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆ ಶ್ರೀಹರಿಯು ಒಡ್ಡಿದ ಅನೇಕ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡು, ಅದರಲ್ಲಿ ಗೆದ್ದು ಬಂದಿದ್ದಾರೆ. ಅದನ್ನೇ ಕೀರ್ತನೆಯಲ್ಲಿ ‘ರೊಕ್ಕ ಎರಡಕ್ಕೂ ಕಾರಣ ಕೇಳಕ್ಕಾ||‘ ಎಂದು ನುಡಿದಿದ್ದಾರೆ.
    ಪುಟಕ್ಕಿಟ್ಟ ಚಿನ್ನದಂತೆ ಮಾನವನ ಬಾಳು ಸಾಗಬೇಕಾದರೆ ‘ನಿಂದಕರಿರಬೇಕು ಜಗದೊಳಗೆ||‘ ಎಂದು ದಾಸರು ಹೇಳಿದ್ದಾರೆ. ಹೀಗೆ ಶ್ರೀಹರಿಯನ್ನು ಕೊಂಡಾಡುತ್ತಾ, ಆತನನ್ನು ಸಾಕ್ಷಾತ್ಕರಿಸಿಕೊಂಡು, ಅವನ ದಿವ್ಯಪಾದವನ್ನು ಸೇರಿದ ಪುರಂದರದಾಸರು ನಿಜಕ್ಕೂ ದಾಸಶ್ರೇಷ್ಠರೇ ಸರಿ!

    ಇಂತಹ ಅನೇಕ ರೀತಿಯ ಪದ-ಪದ್ಯ-ಸುಳಾದಿಗಳನ್ನು ರಚಿಸಿರುವ ದಾಸರು ಗಾನಕ್ಕೆ ಹೆಸರಾದ ನಾರದ ಅವತಾರವೆಂದು ಹೇಳುತ್ತಾರೆ. ಇಂತಹ ದಾಸಶ್ರೇಷ್ಠರು ಭಗವಂತನ ಒಲುಮೆಗೆ ಪಾತ್ರರಾಗಿ ರಕ್ತಾಕ್ಷಿನಾಮ ಸಂವತ್ಸರದ ಪುಷ್ಯ ಬಹುಳ ಅಮಾವಾಸ್ಯೆ ದಿವಸ ಪರಮಾತ್ಮನ ಪಾದಾರವಿಂದವನ್ನು ಸೇರಿದರು. ಇಂತಹ ದಾಸರ ಆರಾಧನೆಯನ್ನು ದೇಶದಾದ್ಯಂತ ಅನೇಕ ದಾಸಕೂಟಗಳೂ, ಜ್ಞಾನಿಗಳೂ, ಸಾಧು ಸತ್ಪುರುಷರೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ.

ಈಶಾವಾಸ್ಯಮಿದಂ ಸರ್ವಂ

ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಮ್"
ಶ್ರೀ ರಾಮ ಮಂದಿರದ ಹತ್ತಿರ, ಸಿಂಧನೂರು

Tuesday, February 5, 2013

ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು 7,8 & 9


(ಮುಂದುವರಿದ ಭಾಗ)

ಏಳನೇ ಅವತಾರ.
 
            ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋಭ್ಯಜಾಯತ |
            ಸ ಯಾಮಾದ್ಯೆಃ ಸುರಗಣೈರಪಾತ್ಸ್ವಾಯಮ್ಭುವಾನ್ತರಮ್ ||  
                                                                        ಭಾಗವತ......1-3-12
 
1.  ಸ್ವಾಯಂಭುವ ಮನುವಿನ ಮೂರು ಹೆಣ್ಣುಮಕ್ಕಳಲ್ಲಿ ದೇವಹೂತಿ ಮತ್ತು ಪ್ರಸೂತಿ ಈ ಇಬ್ಬರ ನಂತರ ಉಳಿದ ಮೂರನೆಯವಳಾದ ಆಕೂತಿಯ ವಿಷಯ ನೋಡೋಣ. ಈ ಆಕೂತಿಯನ್ನು ರುಚಿ ಪ್ರಜಾಪತಿ ಮದುವೆ ಮಾಡಿಕೊಂಡಿದ್ದ.  ಈ ದಂಪತಿಗಳಲ್ಲಿ ಭಗವಂತ ಯಜ್ಞ ನಾಮಕನಾಗಿ ಅವತರಿಸಿಬಂದ.  ಈ ಯಜ್ಞ ನಾಮಕ ಭಗವಂತನೇ ಸ್ವಾಯಂಭುವ ಮನ್ವಂತರದ ಇಂದ್ರನಾದ. ಬೇರೆ ಬೇರೆ ಮನ್ವಂತರಗಳಲ್ಲಿ ಬೇರೆ ಬೇರೆ ದೇವತೆಗಳು ಇಂದ್ರ ಪದವಿಯನ್ನು ಆಳುತ್ತಾರೆ. ಸ್ವಾಯಂಭುವಮನ್ವಂತರದಲ್ಲಿ ಯಜ್ಞನಾಮಕ ಭಗವಂತನೇ ಇಂದ್ರಪದವಿಯಲ್ಲಿ ಇದ್ದ. ನಂತರ ಸ್ವಾರೋಚಿಷ ಮನ್ವಂತರದಲ್ಲಿ ವಾಯುದೇವರೇ ರೋಚನ ನಾಮಕನಾಗಿ ಇಂದ್ರ ಪದವಿಯಲ್ಲಿದ್ದರು. ನಂತರದ ಮನ್ವಂತರಗಳಲ್ಲಿ ಅಶ್ವಿನಿದೇವತೆಗಳು, ಯಮ, ಪುರಂದರ ಎನ್ನುವ ದೇವತೆಗಳು ಇಂದ್ರಪದವಿಯನ್ನು ಆಳಿದರು. ಈ ಯಜ್ಞನಾಮಕನಾದ ಭಗವಂತನೇ ಮುಂದೆ ಕೃಷ್ಣನಾಗಿ, ರೋಚನನಾಮಕ ವಾಯುದೇವರೇ ಭೀಮಸೇನನಾಗಿ, ಪುರಂದರನಾಮಕ ಇಂದ್ರನೇ ಅರ್ಜುನನಾಗಿ, ಅಶ್ವಿನಿ ದೇವತೆಗಳೇ ನಕುಲ-ಸಹದೇವರಾಗಿ ಜನಿಸಿದರು. ಈ ಪಾಂಡವರೆಲ್ಲ ಈ ಮೊದಲು ಇಂದ್ರಪದವಿಯಲ್ಲಿದ್ದು ಬಂದವರು.

2.   ಸ್ವಾಯಂಭುವಮನ್ವಂತರದ ರಕ್ಷಣೆ ಮಾಡಬೇಕಿದ್ದ ಸ್ವಾಯಂಭುವ ಮನುವನ್ನು ಒಮ್ಮೆ ಅಸುರರೆಲ್ಲರೂ ಒಟ್ಟಾಗಿ ಕೊಂದುಬಿಡಬೇಕೆಂದು ತೀರ್ಮಾನಿಸಿದರು. ಹಾಗೆ ಮಾಡುವ ಮೂಲಕ ಪ್ರಪಂಚದ ವ್ಯವಸ್ಥೆಯನ್ನು ಅಲ್ಲೋಲ-ಕಲ್ಲೋಲಗೊಳಿಸಲು ಪ್ರಯತ್ನಿಸಿದರು. ಆಗ ಸ್ವಾಯಂಭುವಮನು ಆ ಅಸುರರೊಡನೆ ಹೋರಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಸ್ವಾಯಂಭುವಮನು, ತನ್ನ ಮಗಳು ಆಕೂತಿಯಮಗನಾಗಿ, ಅಂದರೆ ತನ್ನ ಮೊಮ್ಮಗನಾಗಿ ಅವತರಿಸಿಬಂದ ಯಜ್ಞನಾಮಕ ಭಗವಂತನನ್ನು ಧ್ಯಾನಮಾಡುತ್ತಾ ವೇದಮಂತ್ರವನ್ನು ಕಂಡ. ಅದೇ ಈಶಾವಾಶ್ಯೋಪನಿಷತ್ತು. ಈ ಉಪನಿಷತ್ತಿನ ಮಂತ್ರಗಳಿಂದಲೇ ಸ್ವಾಯಂಭುವಮನು, ತನಗೆ ಆಪತ್ತು ಬಂದಾಗ ಭಗವಂತನನ್ನು ರಕ್ಷಣೆಮಾಡುವಂತೆ ಪ್ರಾರ್ಥಿಸಿದ. ಆಗ ಆ ಮನ್ವಂತರದ ಇಂದ್ರನಾಗಿದ್ದ ಯಜ್ಞನಾಮಕ ಭಗವಂತನು ಪ್ರತ್ಯಕ್ಷನಾಗಿ, ತಾನು, ಯಾಮನಾಮಕರಾದ ದೇವತೆಗಳೊಡನೆ, ಆ ಅಸುರರನ್ನೆಲ್ಲ ನಾಶಮಾಡಿ, ಆ ಮನ್ವಂತರ ಸಾಂಗವಾಗಿ ಮುಂದುವರಿಯುವಂತೆಮಾಡಿ, ಸ್ವಾಯಂಭುವಮನುವಿಗೆ ರಕ್ಷಣೆ ನೀಡಿದ.

3.   ಈಶಾವಾಶ್ಯೋಪನಿಷತ್ತು ಇದು ಈ ಉಪನಿಷತ್ತಿನ ಮೂಲ ಹೆಸರಲ್ಲ. ಈ ಉಪನಿಷತ್ತು ಈಶಾವಾಶ್ಯಮಿದಂಞ್ ಸರ್ವಂ ಎಂದು ಪ್ರಾರಂಭವಾಗುವುದರಿಂದ, ನೆನಪಿಟ್ಟುಕೊಳ್ಳಲು ಸುಲಭವಾಗುವುದೆಂಬ ಕಾರಣದಿಂದ ಬಂದ ಹೆಸರು.  ಈ ಉಪನಿಷತ್ತಿನ ಮೂಲಹೆಸರು ಯಾಜ್ಞೀಯ ಮಂತ್ರೋಪನಿಷತ್ತು.  ಏಕೆಂದರೆ, ಈ ಉಪನಿಷತ್ತಿನ ಪೃತಿಪಾದ್ಯದೇವತೆ ಯಜ್ಞ ನಾಮಕ ಭಗವಂತ. ಇತರೆ ಎಲ್ಲಾ ಉಪನಿಷತ್ತುಗಳು ವೇದಗಳ ಬ್ರಾಹ್ಮಣ ಅಥವಾ ಆರಣ್ಯಕಗಳಲ್ಲಿ ಇವೆ. ಆದರೆ ಈ ಉಪನಿಷತ್ತು ಮಾತ್ರ ಮಂತ್ರಭಾಗದಲ್ಲಿದೆ. ಶುಕ್ಲಯಜುರ್ವೇದದ ಸಂಹಿತೆಯ (ಮಂತ್ರಭಾಗದ) ನಲವತ್ತನೆಯ ಅಧ್ಯಾಯವೇ ಈ ಉಪನಿಷತ್ತು. ಆದುದರಿಂದ ಈ ಉಪನಿಷತ್ತು ಮಂತ್ರೋಪನಿಷತ್ತು, ಪ್ರತಿಪಾದ್ಯ ದೇವತೆ ಯಜ್ಞನಾಮಕನಾದುದರಿಂದ ಯಾಜ್ಞೀಯಮಂತ್ರೋಪನಿಷತ್ತು. ಸ್ವಾಯಂಭುವಮನುವಿನ ನಂತರ, ಈ ಮಂತ್ರವನ್ನ ಕಂಡವರೆಂದರೆ, ಸೂರ್ಯ, ಯಾಜ್ಞವಲ್ಕ್ಯ ಕಣ್ವ ಋಷಿ, ದಧ್ಯಂಗಾಥರ್ವಣ ಮುಂತಾದವರು. ಇದು ಏಳನೇ ಅವತಾರ.

ಎಂಟನೇ ಅವತಾರ

            ಅಷ್ಟಮೋ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ |
            ದರ್ಶಯನ್ವತ್ರ್ಮ ಧೀರಾಣಾಂ ಸರ್ವಾಶ್ರಮ ನಮಸ್ಕೃತಮ್ ||       ಭಾಗವತ  1-3-13


4.   ಇಲ್ಲಿಯವರೆಗೆ ಸ್ವಾಯಂಭುವಮನುವಿನ ಹೆಣ್ಣುಮಕ್ಕಳ ಸಂತತಿಯನ್ನು ನೋಡಿದೆವು. ಸ್ವಾಯಂಭುವಮನುವಿಗೆ ಈ ಮೂವರು ಪುತ್ರಿಯರಲ್ಲದೆ ಇಬ್ಬರು ಗಂಡುಮಕ್ಕಳಿದ್ದರು.  ಅವರೆಂದರೆ, (1) ಉತ್ತಾನಪಾದ; (2)ಪ್ರಿಯವ್ರತ. ಇವರಲ್ಲಿ ಪ್ರಿಯವ್ರತನ ಮಗ ಆಗ್ನೀಧ್ರ; ಆಗ್ನೀಧ್ರನ ಮಗ ನಾಭಿರಾಜ; ನಾಭಿರಾಜನ ಮಗನಾಗಿ ವೃಷಭದೇವ ನಾಮಕನಾಗಿ ಭಗವಂತನ ಅವತಾರ. ನಾಭಿರಾಜ ಒಮ್ಮೆ ಯಜ್ಞ ಮಾಡಿ ತನಗೆ ದೇವರಂಥ ಮಗ ಹುಟ್ಟಬೇಕೆಂದು ಪ್ರಾರ್ಥಿಸಿಕೊಂಡನಂತೆ. ದೇವರಂಥ ಮಗ ಹುಟ್ಟಬೇಕೆಂದರೆ, ದೇವರಂತಹ ಇನ್ನೊಬ್ಬನಿಲ್ಲದ ಕಾರಣ, ಆ ದೇವರೇ ಮಗನಾಗಿ ಹುಟ್ಟಬೇಕಾಯಿತು ಎನ್ನುತ್ತದೆ ಭಾಗವತ. ಹೀಗಾಗಿ ನಾಭಿರಾಜನ ಪ್ರಾರ್ಥನೆಯಂತೆ ನಾಭಿರಾಜ ಮತ್ತು ಅವನ ಪತ್ನಿ ಮೇರುದೇವಿ ಇವರ ದಾಂಪತ್ಯದಲ್ಲಿ ವೃಷಭದೇವ ಎಂಬ ಹೆಸರಿನಿಂದ ಭಗವಂತ ಅವತಾರಮಾಡಿದ. ಈ ವೃಷಭದೇವನ ಮಗನೇ ಅತ್ಯಂತ ಪ್ರಸಿದ್ದನಾದ ಭರತ ಚಕ್ರವತರ್ಿ.  ಈ ಭರತಚಕ್ರವರ್ತಿಯಿಂದಲೇ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ಬಂದಿತು. ಅದಕ್ಕೂ ಮುಂಚೆ ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಇರಲಿಲ್ಲ.

5.    ಈ ವೃಷಭದೇವ ಇಡೀ ದೇಶವನ್ನಾಳುವ ಸಮಯದಲ್ಲಿ, ಭಗವಂತ ಒಂದು ಲೀಲಾನಾಟಕವಾಡಿದ್ದಾನೆ. ಈ ಸ್ವಾಯಂಭುವಮನ್ವಂತರದ ಇಂದ್ರ ಯಜ್ಞನಾಮಕನೂ ಭಗವಂತನ ಅವತಾರ. ಈ ಭೂಮಿಯನ್ನು ಆಳುತ್ತಿರುವ ವೃಷಭದೇವನೂ ಭಗವಂತನ ಅವತಾರ. ಹೀಗಿರುವಾಗ ಒಮ್ಮೆ ಯಜ್ಞನಾಮಕ ಇಂದ್ರನು ಬೇಕೆಂದೇ ಮಳೆ ಬರಿಸಲಿಲ್ಲವಂತೆ. ಆಗ ವೃಷಭದೇವನು ಮಳೆ ಬರಿಸಿದನಂತೆ. ಈ ರೀತಿಯಾಗಿ ಎರಡು ಭಗವದ್ರೂಪಗಳ ನಡುವೆ ಜಗಳವಾದಂತೆ ಲೀಲಾನಾಟಕ.

6.   ಈ ರೀತಿಯಾಗಿ ದೇಶವನ್ನಾಳಿದ ವೃಷಭದೇವ ಒಂದು ದಿನ ಎಲ್ಲಾ ಆಡಳಿತವನ್ನು ತನ್ನ ಮಗನಾದ ಭರತನಿಗೆ ಬಿಟ್ಟುಕೊಟ್ಟು ತಾನು ಎಲ್ಲವನ್ನು ತೊರೆದು ಎಲ್ಲ ಆಶ್ರಮದರೂ ನಮಸ್ಕರಿಸುವಂತಹ ಸನ್ಯಾಸಾಶ್ರಮ ಸ್ವೀಕಾರ ಮಾಡಿ ಪರಿವ್ರಾಜಕನಾಗಿ ಹೊರಟುಹೋದನಂತೆ. ಎಲ್ಲವನ್ನೂ ಅಂದರೆ ತಾನು ಉಟ್ಟ ಬಟ್ಟೆಗಳನ್ನೂ ಸಹ ತೊರೆದು, ದಿಗಂಬರನಾಗಿ ಹೊರಟುಬಿಟ್ಟ. ಜನ ಅವನನ್ನು ಹುಚ್ಚನಾದ ಎಂದು ತಿಳಿದು, ಅಯ್ಯೋ ಒಬ್ಬ ಮಹಾನ್ ಚಕ್ರವತರ್ಿಗೆ ಎಂಥಾ ಗತಿ ಬಂತು, ತಲೆಕೆಟ್ಟುಹೋಗಿ, ಬಟ್ಟೆ ಬಿಚ್ಚಿಕೊಂಡು ತಿರುಗಾಡುತ್ತಿದ್ದಾನೆ ಎಂದು ಅನುಕಂಪದ ಮಾತುಗಳನ್ನಾಡಿದರಂತೆ. ಆದರೆ ವಾಸ್ತವವಾಗಿ ತಲೆ ಕೆಟ್ಟಿದ್ದು ಈ ರೀತಿ ಮಾತನಾಡುವ ಜನರಿಗೆ; ವ್ರಷಭದೇವ ವ್ಯೆರಾಗ್ಯತಾಳಿ ಆ ರೀತಿ ವತರ್ಿಸುತ್ತಿದ್ದಾನೆ ಎಂಬ ವಿಷಯ ಸಾಮಾನ್ಯಜನರ ಬುದ್ದಿಗೆ ಎಟುಕದ ವಿಷಯವಾಗಿತ್ತು. ಹೀಗೆ ಸರ್ವಸಂಗ ಪರಿತ್ಯಾಗಮಾಡಿ ಹೊರಟ ವೃಷಭದೇವ ನಮ್ಮ ದಕ್ಷಿಣಕನ್ನಡ ಜಿಲ್ಲೆಯ, ಕೊಲ್ಲೂರಿನ ಹತ್ತಿರವಿರುವ ಕುಟಚಾದ್ರಿ ಬೆಟ್ಟದಲ್ಲಿ ಬಂದು ಮಲಗಿಕೊಂಡಿದ್ದನಂತೆ. ಒಂದುದಿವಸ ಅವನು ತನ್ನ ಯೋಗಸಿದ್ದಿಯಿಂದ ಯೋಗಾಗ್ನಿಯನ್ನು ಸೃಷ್ಟಿಸಿ ತನ್ನ ಅವತಾರ ಸಮಾಪ್ತಿ ಮಾಡಿದ. ಅವನು ಸೃಷ್ಟಿಸಿದ ಅಗ್ನಿಯಿಂದಾಗಿ ಕಾಡಿಗೆ ಬೆಂಕಿಹತ್ತಿ ಕಾಳ್ಗಿಚ್ಚು ಹರಡಿ ಅರಣ್ಯ ಉರಿಯತೊಡಗಿತು. ಬೆಂಕಿ ಆರಿದ ನಂತರದಲ್ಲಿ ಜನರಿಗೆ ವೃಷಭದೇವ ಕಾಣಲಿಲ್ಲ. ಆವರು ಅವನನ್ನ ಕಾಳ್ಗಿಚ್ಚಿನಲ್ಲಿ ಸುಟ್ಟುಹೋದ ಎಂದು ತಿಳಿದುಕೊಂಡರು.  ಹೀಗೆ ಜನರಿಗೆ ಭ್ರಮೆಯುಂಟಾಗುವಂತೆ ತನ್ನ ವಿಚಿತ್ರ ಲೀಲೆಯನ್ನು ತೋರಿದ. ಇವನು ದಿಗಂಬರನಾಗಿ ತಿರುಗಾಡುತ್ತಾ, ತನ್ನ ತಲೆಕೂದಲುಗಳನ್ನು ತಾನೇ ಕಿತ್ತು ತೆಗೆಯುತ್ತಿದ್ದ ವರ್ತನೆಯನ್ನು ಅನುಸರಿಸಿ ಒಂದು ಹೊಸ ಪಂಥವೇ ಹುಟ್ಟಿಕೊಂಡಿತು. ಅದೇ ಜೈನ ಪಂಥ. ಈ ವೃಷಭದೇವನೇ ಜೈನಪಂಥದ ಆದಿ ತೀರ್ಥಂಕರ. ಜೈನ ಧರ್ಮದಲ್ಲಿ ಒಟ್ಟು ಇಪ್ಪತ್ನಾಲ್ಕು ತಿರ್ಥಂಕರರು ಆಗಿಹೋಗಿದ್ದಾರೆ. ಇಪ್ಪತ್ನಾಲ್ಕನೇ ಅಂದರೆ ಕೊನೆಯ ತಿರ್ಥಂಕರನೇ ಮಹಾವೀರ. ಇವನು ಗೌತಮಬುದ್ದನ ಸಮಕಾಲೀನ.  ಹೀಗೆ ಜೈನ ಮತ್ತು ಬೌಧ್ದ ಧರ್ಮಗಳೆರಡಕ್ಕೂ ಮೂಲ ಪುರುಷ, ಭಗವಂತನ ಅವತಾರಗಳೇ ಎಂದು ಭಾಗವತ ನಮಗೆ ತಿಳಿಸಿಕೊಡುತ್ತದೆ.

7.    ಈ ಎಂಟು ಅವತಾರಗಳು ಸ್ವಾಯಂಭುವಮನ್ವಂತರದಲ್ಲಿ ಆದ ಅವತಾರಗಳು.

8.   ಸ್ವಾಯಂಭುವಮನುವಿನ ಇನ್ನೊಬ್ಬ ಮಗ ಉತ್ತಾನಪಾದನ ಸಂತತಿಯಲ್ಲಿ ವಿಶೇಷ ಭಗವಂತನ ಅವತಾರಗಳು ಇಲ್ಲವಾದರೂ, ಉತ್ತಾನಪಾದನ ಒಬ್ಬ ಮಗ ಧೃವನನ್ನು ಅನಗ್ರಹಿಸಿದ ರೂಪ ಭಗವಂತನ ವಾಸುದೇವ ರೂಪ. ಧೃವವರದ ವಾಸುದೇವ.  ಸ್ವಾಯಂಭುವ ಮನ್ವಂತರದ ನಂತರದ ಮನ್ವಂತರ ಸ್ವಾರೋಚಿಷ ಮನ್ವಂತರದಲ್ಲಿ ಭಗವಂತನ ಅವತಾರವಿಲ್ಲ. ನಂತರದ ಮನ್ವಂತರಗಳೆಂದರೆ, ಉತ್ತಮ, ತಾಪಸ ಮತ್ತು ರೈವತ. ಈ ಮೂರು ಮನುಗಳು ಪ್ರಿಯವ್ರತನ ಮಕ್ಕಳು.  ಈ ಮೂವರಲ್ಲಿ ತಾಪಸ ಮನು ಭಗವಂತನ ಅವತಾರ ಎಂದು ತಿಳಿದುಬರುತ್ತದೆ.  ನಂತರದ ಆರನೇ ಮನ್ವಂತರವೇ ಚಾಕ್ಷುಷ ಮನ್ವಂತರ. ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹಿಂದಿನ ಮನ್ವಂತರ.  ಈ ಮನ್ವಂತರದಲ್ಲಿಯೂಸಹ ಭಗವಂತನ ಅವತಾರವಿಲ್ಲವಾದರೂ, ಒಂದು ಆವೇಶಾವತಾರವಿದೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.
                                                       (ಮುಂದುವರಿಯುವದು)
ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ.