Wednesday, December 26, 2012

ಶ್ರೀ ಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು

 

ಸೃಷ್ಟಿಯ ಆದಿಯಲ್ಲಿ ಅಂದರೆ ಚತುರ್ಮುಖ ಬ್ರಹ್ಮನ 100 ವರ್ಷಗಳು ಮುಗಿದನಂತರ  (ಬ್ರಹ್ಮನ ಒಟ್ಟು ಆಯುಷ್ಯ ಮನವಲೋಕದ ಗಣನೆಯಲ್ಲಿ 31,104,000,00,00,000 ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ ವರ್ಷಗಳು) ಬ್ರಹ್ಮಾಂಡ ಸಂಪೂರ್ಣ ನಾಶವಾಗಿ ನಂತರ ಮತ್ತೆ ಹೊಸ ಸೃಷ್ಟಿ. ಈ ಸೃಷ್ಟಿಯ ಆದಿಯಲ್ಲಿ ಏನೂ ಇರಲಿಲ್ಲ. ಈ ಏನೂ ಇರದ ಸಮಯದಲ್ಲಿ ಒಂದು ಇತ್ತು.  ಅದೇ ಭಗವಂತ. ಆ ಭಗವಂತ ಪ್ರಳಯದ ಸಮಯದಲ್ಲಿ ತನ್ನನ್ನು ಮುಚ್ಚಿಕೊಂಡಿದ್ದನು. ಸೃಷ್ಟಿ ಕಾಲವು ಪ್ರಾಪ್ತವಾದಾಗ ಕತ್ತಲು ಕರಗಿ ತಾನು ಪ್ರಕಟಗೊಂಡ ಇದನ್ನೆ ಭಾಗವತದಲ್ಲಿ
 
"ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ ಸಂಭೂತಂ ಷೋಡಶಕಲ ಮಾದೌ ಲೋಕಸಿಸೃಕ್ಷಯಾ "

ಎಂದು ಉಲ್ಲೇಖಿಸಿ ಭಗವಂತನು ಪುರುಷ ರೂಪವನ್ನು ಗ್ರಹಣ ಮಾಡಿದ ಎಂದು ಹೇಳುತ್ತದೆ. ಇಲ್ಲಿ ಗ್ರಹಣ ಮಾಡುವುದು ಅಥವಾ ಸ್ವೀಕರಿಸುವುದು ಎಂದರೇ, ತಾನು ಪ್ರಕಟನಾದ ಎಂದೇ ಅರ್ಥ. ಇದು ಭಗವಂತನ ಮೂಲ ರೂಪ. ಇನ್ನು ಎಲ್ಲಾ ಭಗವಂತನ ಅವತಾರ ರೂಪಗಳು ಈ ರೂಪದಿಂದಲೇ ಪ್ರಕಟವಾಗುತ್ತವೆ. ಮತ್ತು ಈ ರೂಪದಲ್ಲೇ ವಿಲೀನವಾಗುತ್ತವೆ. ಈ ರೂಪವನ್ನು ಪದ್ಮನಾಭ ರೂಪ ಎಂದು ಸಹ ಕರೆಯುತ್ತಾರೆ. ಈ ರೂಪದಿಂದಲೇ ಮಹತ್ತತ್ವದ ಸೃಷ್ಟಿಯಾಗುತ್ತದೆ. ಅಂದರೆ 14 ಕಲೆಗಳುಳ್ಳ ಅರ್ದಾತ 14 ಲೋಕಗಳನ್ನೊಳಗೊಂಡ ಬ್ರಹ್ಮಾಂಡ ಸೃಷ್ಟಿಯಾಗುತ್ತದೆ. (14ಲೋಕಗಳು ಎಂದರೇ ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯ ಎಂದು 7 ಮೇಲಿನ ಲೋಕಗಳು ಹಾಗೂ ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ ಎಂಬ ಏಳು ಅಧೋಲೋಕಗಳು) ಈ ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾದ ಈ ಪುರಷ ರೂಪ ಒಂದನೆಯ ಪುರಷ ರೂಪ (ಪ್ರಥಮಂ ಮಹತ್ಸ್ರಷ್ಟುಃ ) ಈ ರೀತಿಯಾಗಿ ಸೃಷ್ಟವಾದ ಬ್ರಹ್ಮಾಂಡದ ಒಳಗೆ ತಾನು ಇನ್ನೊಂದು ರೂಪದಿಂದ ಪ್ರವೇಶಿಸಿದ (ತತ್ ಸೃಷ್ಟ್ವಾ ತದೇನುಪ್ರಾವಿಶತ್) ಈ ರೀತಿಯಾಗಿ ಇಡೀ ಬ್ರಹ್ಮಾಂಡದ ಒಳಗೆ ತುಂಬಿಕೊಂಡ ಈ ರೂಪವೂ ಸಹ ಪುರಷರೂಪ -2ನೇ ಪುರುಷ ರೂಪ (ದ್ವಿತೀಯಂ ಅಂಡ ಸಂಸ್ಥಿತಂ) ನಂತರ ಬ್ರಹ್ಮಾಂಡದ ಒಳಗೆ ಪಿಂಡಾಂಡಗಳನ್ನು (ಪ್ರಾಣಿಗಳ ದೇಹಗಳನ್ನು) ಸೃಷ್ಟಿಸಿ  ಅದರಲ್ಲಿ ಪ್ರವೇಶ ಮಾಡಿದ. ಇದು 3ನೇ ಪುರಷ ರೂಪ (ತೃತೀಯಂ ಪ್ರಾಣಿನಾಂ ದೇಹೇ) ಈ ರೀತಿಯಾಗಿ ಭಗವಂತನ ಮೂರು ಪುರಷ ರೂಪಗಳಿರುತ್ತವೆ. ಇದನ್ನೇ ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ
ಪುರಷ ರೂಪತ್ರಯ ಪುರಾತನ
ಪುರಷ ಪುರುಷೋತ್ತಮ ಕ್ಷರಾಕ್ಷರ
ಪುರಷ ಪೂಜಿತ ಪಾದ ಪೂರ್ಣಾನಂದಜ್ಞಾನಮಯ ||  
                                                                                         - ವ್ಯಾಪ್ತಿ ಸಂಧಿ

ಎಂದು ಉಲ್ಲೇಖಿಸಿರುತ್ತಾರೆ.
ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರಗಳು
 ಒಟ್ಟು 14 ಮನ್ವಂತರಗಳಿದ್ದು ಮೊದನೆಯದು ಸ್ವಾಯಂಭುವ ಮನ್ವಂತರ ಸ್ವಾಯಂಭುವ ಮನು  ಈ ಮನ್ವಂತರದ ಮನು. ಇನ್ನು 13 ಮನ್ವಂತರಗಳು ಈ ರೀತಿ ಇವೆ. 2) ಸ್ವಾರೋಚಿಷ ಮನ್ವಂತರ  3) ಉತ್ತಮ ಮನ್ವಂತರ  4) ತಾಪಸ  5) ರೈವತ  6) ಚಾಕ್ಷುಷ  7) ವೈವಸ್ವತ 8) ಸೂರ್ಯ ಸಾವರ್ಣಿ 9) ದಕ್ಷಸಾವರ್ಣಿ 10) ಬ್ರಹ್ಮಸಾವರ್ಣಿ  11) ಧರ್ಮ ಸಾವರ್ಣಿ  12) ರುದ್ರ ಸಾವರ್ಣಿ   13) ದೇವ ಸಾವರ್ಣಿ   14) ಇಂದ್ರ ಸಾವರ್ಣಿ  ಹೀಗೇ 14 ಮನ್ವಂತರಗಳು ಒಂದೊಂದು ಮನ್ವಂತರದ ಕಾಲಾವಧಿ ಸುಮಾರಾಗಿ 31 ಕೋಟಿ ವರ್ಷಗಳು ಬ್ರಹ್ಮನ ಒಂದು ಹಗಲಿನಲ್ಲಿ ಈ 14 ಮನ್ವಂತರಗಳು ಮುಗಿದು ಹೋಗುತ್ತವೆ. ಬ್ರಹ್ಮನ ಒಂದು ಹಗಲು ಎಂದರೆ 432 ಕೋಟಿ ವರ್ಷಗಳು ಮತ್ತು 432 ಕೋಟಿ ವರ್ಷಗಳು ಬ್ರಹ್ಮನ ಒಂದುರಾತ್ರಿ ಒಟ್ಟು 864 ಕೋಟಿ ವರ್ಷಗಳಾದರೆ ಬ್ರಹ್ಮನ ಒಂದುದಿನ ಬ್ರಹ್ಮನ ಆಯುಷ್ಯ ಒಂದು ನೂರು (100)ವರ್ಷ ಅರ್ಥಾತ್ 864x30x12x100 ವರ್ಷಗಳು ಅಂದರೆ 31,104,000,0000000 ವರ್ಷಗಳು ಆನಂತರ ಮಹಾಪ್ರಳಯ ಪ್ರಳಯ ಮುಗಿದ ನಂತರ ಮತ್ತೆ ಸೃಷ್ಟಿ 3 ಪುರುಷ ರೂಪಗಳ ಅಭಿವೃಕ್ತಿ ಸ್ವ್ವಾಯಂಭುವ ಮನ್ವಂತರ ಪ್ರಾರಂಭ ಅದರಲ್ಲಿ ಮೊದಲನೆ ಅವತಾರ

ಭಾಗವತ :- 
ಸ ಏವ ಪ್ರಥಮಂ ದೇವ ಕೌಮಾರಂ ಸರ್ಗಮಾಸ್ಥಿತಃ  |
ಚಚಾರ ದುಶ್ಚರಂ ಬ್ರಹ್ಮಾ ಬ್ರಹ್ಮಚರ್ಯಮಖಂಡಿತಂ  ||
                                                                                                     -1ನೇ ಸ್ಕಂದ /3 ಅಧ್ಯಾಯ . 6 ಶ್ಲೋಕ
ಪ್ರಥಮ ಅವತಾರ ಸನತ್ಕುಮಾರ ಅವತಾರ ಈ ಸನತ್ಕುಮಾರ ಎಂದರೆ ಚತುಃಸನರಲ್ಲಿ ಒಬ್ಬರಾದ  ಸನತ್ಕುಮಾರ ಎಂದು ಎಲ್ಲರೂ ವ್ಯಾಖ್ಯಾನ ಬರೆದಿದ್ದಾರೆ ಚತುಃಸನರು ಎಂದರೆ ಸನಕ, ಸನಂದನ, ಸನಾತನ, ಸನತ್ಕುಮಾರ .ಈ 4 ಮಂದಿ ಇವರಲ್ಲಿ ಕೊನೆಯವರಾದ ಸನತ್ಕುಮಾರನೇ ಭಗವಂತನ ಅವತಾರವೆಂದು ಎಲ್ಲರೂ ತಿಳಿದುಕೊಂಡಿದ್ದರು. ಶ್ರೀ ಮಧ್ವಾಚಾರ್ಯರು ಭೂಮಿಯಲ್ಲಿ ಅವತಾರ ಮಾಡಿ ಭಾಗವತಕ್ಕೆ ವ್ಯಾಖ್ಯಾನ ಮಾಡುವವರೆಗೂ ಎಲ್ಲರೂ ತಪ್ಪಾಗಿಯೇ ತಿಳಿದುಕೊಂಡಿದ್ದರು ನಂತರದಲ್ಲಿ ಶ್ರೀ ಮಧ್ವಾಚಾರ್ಯರು, ಚತುಃಸನರಲ್ಲಿ ಒಬ್ಬರಾದ ಸನತ್ಕುಮಾರ ಭಗವಂತನ ಅವತಾರವಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸನತ್ಕುಮಾರ  ಬ್ರಹ್ಮನ ಮಾನಸ ಪುತ್ರ ಮತ್ತು ಈ ಸನತ್ಕುಮಾರನೇ ವಿಷ್ಣುವಿನ ಮಗ ಕಾಮನಾಗಿ ನಂತರದಲ್ಲಿ ರುದ್ರದೇವರ ಮಗ ಸ್ಕಂದನಾಗಿ ಹೀಗೇ ತ್ರಿಮೂರ್ತಿಗಳಿಗೂ ಮಗನಾಗಿ ಜನಿಸಿದವನು . ಮತ್ತೆ ಇದೇ ಸನತ್ಕುಮಾರನೇ ದ್ವಾಪರದಲ್ಲಿ ಕೃಷ್ಣ ರುಗ್ಮಿಣೀಯರಲ್ಲಿ ಪ್ರದ್ಯುಮ್ನನಾಗಿ ಜನಿಸಿದವನು.

 ಈ ಚತುಃಸನರಿಗೂ ಮತ್ತು ಬ್ರಹ್ಮ ರುದ್ರಾದಿಗಳಿಗೂ ಸಹ ಉಪದೇಶ ಮಾಡಿದ ಭಗವಂತನ ಅವತಾರವಾದ ಸನತ್ಕುಮಾರ ರೂಪ ಬೇರೆಯೇ ಇದೆ ಎಂದು ತಿಳಿಸಿಕೊಟ್ಟಿರುತ್ತಾರೆ. ಈ ಅವತಾರದಲ್ಲಿ ಭಗವಂತ ದುಶ್ಚರವಾದ ಅಖಂಡ ಬ್ರಹ್ಮಚರ್ಯವನ್ನು ಹೇಗೆ ಆಚರಿಸಬೇಕೆಂದು ತಿಳಿಸಿಕೊಟ್ಟ ರೂಪ ಹೀಗೆ ಶ್ರೀ ಮದಾಚಾರ್ಯರು ಅಧ್ಯಾತ್ಮಲೋಕಕ್ಕೆ ಕೊಟ್ಟಿರುವ ಕೊಡುಗೆಗಳು ಅಸದೃಶವಾಗಿವೆ. ಈ ಮೊದಲು ಯಾರಿಗೂ ತಿಳಿಯದ / ಹೊಳೆಯದ ಅನೇಕ ವಿಷಯಗಳನ್ನು ಶ್ರೀ ಮದಾಚಾರ್ಯರು ಪ್ರಮಾಣಗಳ ಸಹಿತ ಲೋಕಕ್ಕೆ ಸಾಧಕರಿಗೆ ತಿಳಿಸಿಕೊಟ್ಟು ಮಹದುಪಕಾರ ಮಾಡಿರುತ್ತಾರೆ ಅವರ ಈ ಉಪಕಾರ ಸ್ಮರಣೆಯೇ ನಮ್ಮ ಪರಮ ಕರ್ತವ್ಯ.


 2ನೇ ಅವತಾರ ಮುಂದಿನ ಭಾಗದಲ್ಲಿ . . . . . .
 
ಕೆ.ಸತ್ಯನಾರಾಯಣರಾವು
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ  - 583 201

 

Saturday, December 15, 2012

ಧನುರ್ಮಾಸ - Part 2/2

||ಶ್ರೀ ಕೇಶವ ಪ್ರಸನ್ನ ||
 
 * ಧನುರ್ಮಾಸ *
 
ಶ್ರೀ ನಂದನನಾಮ ಸಂ ದಕ್ಷಿಣಾಯಣ ಮಾರ್ಗಶಿರ ಶುಕ್ಲ ತ್ರತಿಯಾ ರವಿವಾರ ತಾ 16-12-2012 ರಿಂದಾ ಪುಷ್ಯಶುಕ್ಲ ದ್ವಿತಿಯಾ ರವಿವಾರ 13-01-2013ರ ವರೆಗೆ ಧನುರ್ಮಾಸವು ಇರುತ್ತದೆ. ಮಾರ್ಗಶಿರಮಾಸದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುವನು. ಅದಕ್ಕೆ ಈ ಮಾಸಕ್ಕೆ ಧನುರ್ಮಾಸ ಎಂದುಹೆಸರು.

ಒಂದು ವರುಷಲ್ಲಿ ಎರಡು ಆಯನಗಳು ದಕ್ಷಿಣಾಯಣ, ಉತ್ತರಾಯಣ ಎಂದು. ದಕ್ಷಿಣಾಯಣವು ಆಷಾಢದಿಂದಾ ಮಾರ್ಗಶಿರ್ಷದವರಗೆ, ಹಾಗುಪುಷ್ಯದಿಂದಾ ಜೇಷ್ಠದವರಗೆ ಉತ್ತರಾಯಣ ಎಂದು. ದಕ್ಷಿಣಾಯಣವು ದೆವತೆಗಳಿಗೆ ರಾತ್ರಿಯಾಗಿದೆ, ಉತ್ತರಾಯಣವು ಹಗಲು ಕಾಲವಗಿದೆ. ದಕ್ಷಿಣಾಯಣದ (6)ಆರು ತಿಂಗಳಲ್ಲಿ ಎರಡೆರಡು ತಿಂಗಳಿಗೊಂದು ಯಾಮದಂತೆ (3)ಮೂರು ಯಾಮಗಳು. ಮೊದಲಿನ ಏರಡು ಯಾಮಗಳು ಚಾತುರ್ಮಾಸ್ಯ ಕಾಲವೆಂದು ಪ್ರಸಿದ್ದವಾಗಿವೆ. ಕಾರ್ತಿಕ ಮಾಸ ಶುದ್ಧ ದ್ವಾದಸಿಯಂದು ಭಗವಂತನು ಏಳುವನು. ಮಾರ್ಗಶಿರ ಮಾಸವು ಮೊರನೆಯಾಮದ ಕೊನೆಯ ಪ್ರಹರವಾಗಿದೆ. ಉತ್ಥಾನ ದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೊದಯ ಕಾಲವಾಗಿದೆ.

ಈ ಕಾಲದಲ್ಲಿ ದೇವತೆಗಳು ಭಗವಂತನಿಗೆಹುಗ್ಗಿಯನ್ನು ನಿವೆದಿಶಿದರು. ಪ್ರತಿಯೊಬ್ಬನೂ ಧನುರ್ಮಾಸ ಒಂದು ತಿಂಗಳುಕಾಲ ಸೂರ್ಯೊದಯಕ್ಕೆ (96)ತೊಂಬತ್ತಾರು ನಿಮಿಷ (ಸುಮಾರು 4.30ಕ್ಕೆ)ಮೊದಲು ಎದ್ದು ದೇವರ ಪೂಜೆಮಾಡಿ ಮುದ್ಗಾನ್ನ, ಪಾಯಸಾದಿಭಕ್ಷ್ಯಗಳನ್ನುನೆವೇದ್ಯ ಮಾಡಬೆಕು. ನಂತರದಲ್ಲಿ ಸಂಧ್ಯಾವಂದನೆ,ನಿತ್ಯಾನ್ಹಿಕ ಗಳನ್ನು ಮಾಡಬೆಕು. ಸೂರ್ಯೊದಯವಾದಮೇಲೆ ಬ್ರಾಹ್ಮಣರ ಭೋಜನಮಾಡಿಸಿದನಂತರ ತಾನೊ ಭುಂಜಿಸಬೆಕು.

ಹುಗ್ಗಿಯಲ್ಲಿರಬೆಕಾದವಸ್ತುಗಳೆಂದರೆ ಅಕ್ಕಿ,ಹೆಸರುಬೆಳೇ,ಬೆಲ್ಲಾ,ಶುಂಠಿ,ಏಲಕ್ಕಿ,ತುಪ್ಪಾ,ಮೊಸರು. ಅಕ್ಕಿಯಪ್ರಮಾಣದಷ್ಠೆ ಹೆಸರು ಬೆಳೆಯನ್ನು ಹಾಕಿ ತಯ್ಯಾರಿಸಿದ ಮುದ್ಗಾನ್ನವು ಉತ್ತಮವಾದದ್ದು. ಅಕ್ಕಿಯ ಪ್ರಮಾಣದ ಅರ್ದದಷ್ಟು ಬೆಳೆ ಹಾಕಿ ಮಾಡಿದ ಹುಗ್ಗಿಯು,ಮಧ್ಯಮವಾದದ್ದು. ಅಕ್ಕಿಯ ಪ್ರಮಾಣದ ಕಾಲುಭಾಗ ಹೆಸರುಬೇಳೆಯನ್ನು ಉಪಯೊಗಿಸಿತಯ್ಯರಿಸಿದ ಹುಗ್ಗಿಯು ಅಧಮ ಎನಿಸುವದು. ಇನ್ನು ಅಕ್ಕಿಯಪ್ರಮಾಣಕ್ಕೆ ಎರಡುಪಟ್ಟು ಹೆಸರು ಬೆಳೆಯನ್ನು ಸೆರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೆಷ್ಠವಾಗಿರುತ್ತದೆ.

 - 2 -
ನಾನು ದರಿದ್ರನೆಂದುಮುದ್ಗಾನ್ನವನ್ನು ಭಗವಂತನಿಗೆ ಅರ್ಪಿಸದೆ ಇರಬಾರದು. ನಿವೇದಿಸದ ವ್ಯಕ್ತಿಯು ಏಳು ಜನ್ಮದಲ್ಲಿ ದರಿದ್ರನಾಗುವನು.

!ಶಚೀ ದೇವಿಯ ಧನುರ್ಮಾಸ ಪೂಜೆ!

 ಇಂದ್ರದೇವರಪತ್ನಿಯಾದ ಇಂದ್ರಾಣೀದೇವಿಯು ತನ್ನ ಪತಿಯಾದ ಇಂದ್ರದೇವರು ಇಂದ್ರ ಪದವಿಯನ್ನು ಕಳೆದುಕೊಂಡು ಪದಚ್ಯುತರಾದಾಗ, ಧು:ಖಗೊಂಡ ಶಚೀದೇವಿಯು ಧನುಮರ್ಾಸದ ಅರುಣೋದಯದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿತನ್ನಪತಿಯಪದವಿಯನ್ನೂ, ನಿತ್ಯೈಶ್ವರ್ಯವನ್ನೂ ಸಹ ಪಡೆದಳು. ಲಕ್ಷ್ಮೀ ಪ್ರಾಪ್ತಿಗಾಗಿಲಕ್ಷ್ಮೀ ಪೊಜೆ - ಧನುರ್ಮಾಸದಲ್ಲಿ ಶ್ರೀ ಹರಿಗೆ ಮುಧ್ಗಾನ್ನವನ್ನು ಸಮರ್ಪಿಸಿನಂತರಲಕ್ಷ್ಮೀದೇವಿಯನ್ನು ದ್ವಾದಶನಾಮಗಳಿಂದಾ ಹನ್ನೆರಡು ಬಾರಿ ಕುಂಕುಮ,ಅರಿಷಿಣ,ಪುಷ್ಪಾದಿಗಳಿಂದಾ ಅರ್ಚಿಸಿ ಹರಿನಿವೇದಿತವಾದ ಹುಗ್ಗಿಯನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.

ದ್ವಾದಶ ನಾಮಗಳು: ಶ್ರೀದೇವೈ ನಮ:, ಅಮ್ರತೋದ್ಭವಾಯೈ ನಮ:, ಕಮಲಾಯೈ ನಮ:, ಲೋಕಸುಂದರ್ಯೈ ನಮ:,ವಿಷ್ಣುಪತ್ನೈ ನಮ:, ಶ್ರೀ ವೈಷ್ಣವೈ ನಮ:,ವರಾರೋಹಾಯೈ ನಮ:,ಹರಿವಲ್ಲಭಾಯೈ ನಮ:, ಶಾಂಗ್ರ್ರಣ್ಯೈನಮ:, ದೇವಿದೇವಿಕಾಯೈ ನಮ:, ಮಹಾಲಕ್ಷ್ಮೀನಮ:, ತ್ರಿಲೋಕಸುಂದರ್ಯೈನಮ:,

ಭದ್ರಲಕ್ಷ್ಮೀ ಸ್ತೊತ್ರ -
ಶ್ರೀ ಪದ್ಮಾ ಕಮಲಾಮುಕುಂದಮಹಿಷೀ ಲಕ್ಷ್ಮೀ ತ್ರಿಲೋಕೇಶ್ವರಿ|
 ಮಾ ಕ್ಷೀರಾಬ್ಧಿಸುತಾರವಿಂದಜನನೀ. ವಿದ್ಯಾ ಸರೋಜಾತ್ಮಿಕಾ||
ಸರ್ವಾಭೀಷ್ಠಫಲಪ್ರದೇತಿ ಸತತಂ ಸರ್ವಾನ್ ಲಭಂತೇ ಶುಭಾನ್||

ಈ ಭದ್ರಲಕ್ಷ್ಮೀಸ್ತವವನ್ನು ತುಲಾಮಾಸದಲ್ಲಿ ಕಾವೇರಿ ಸ್ನಾನವನ್ನು ಮಾಡಿಬಿಲ್ವವ್ರಕ್ಷದಕೆಳಗೆ ಕುಳಿತು ಪಠಿಸಿದರೆಶುಭವಾಗುವದು. ಫಲಶ್ರುತಿ-ಧನುರ್ಮಾಸದಲ್ಲಿಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುಂಟುಮಾಡುವುದು,ಶತ್ರುಗಳು ನಶಿಸುವರು, ದೀರ್ಘವಾದ ಆಯುಷ್ಯವನ್ನುಪಡೆಯಬಹುದು, ಧನಧಾನ್ಯ ಸಂಪತ್ತು, ಮುಂತಾದ ಸಕಲ ಭಾಗ್ಯವುಂಟಾಗುವದು. ಜನ್ಮಜನ್ಮಗಳಲ್ಲಿ ವಿಷ್ಣುಭಕ್ತರಾಗಿ ಜನಿಸುವರು.

 !!*****!!

 ಸಂಗ್ರಹ - ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ. ಹುಬ್ಬಳ್ಳಿ, 9448215151

 

Friday, December 14, 2012

ಧನುರ್ಮಾಸ - Part 1/2

ಧನುರ್ಮಾಸ

ಮಾಸಗಳಲ್ಲಿ ಎರಡು ವಿಧ. ಸೌರ ಮಾಸ ಮತ್ತು ಚಾಂದ್ರಮಾಸ ಎಂಬುದಾಗಿ.
ಚಾಂದ್ರಮಾಸ ಎಂದರೆ ಶುಕ್ಲ ಪಕ್ಷದ ಪ್ರತಿಪದಾ (ಪಾಡ್ಯ) ದಿಂದ ಹಿಡಿದು ಅಮಾವಾಸ್ಯೆಯವರೆಗಿನ ದಿನಗಳನ್ನು ಚಂದ್ರಮಾಸಗಳೆಂದು ಕರೆಯುತ್ತಾರೆ. ಸೌರಮಾಸ ಎಂದರೆ ಸೂರ್ಯನು ಅಶ್ವಿನಿ ನಕ್ಷತ್ರಗಳಿಂದ ಯುಕ್ತವಾದ ರಾಶಿಗಳಲ್ಲಿ ಸಂಚರಿಸುವಾಗ ಜರುಗುವ ಒಂದೊಂದು ಸಂಕ್ರಮಣಗಳಿಗೆ ಸೌರಮಾಸಗಳೆಂದು ಕರೆಯುತ್ತಾರೆ. ಚಾಂದಮಾಸಕ್ಕೆ ನಿಗದಿತ ಸಮಯವಿಲ್ಲವಾದರೆ, ಸೌರಮಾಸಕ್ಕೆ ನಿಗದಿತ ಸಮಯವಿದೆ.
ಧನುರ್ಮಾಸ ಎಂದರೆ ಸೂರ್ಯನು ಮೂಲಾ ನಕ್ಷತ್ರದಿಂದ ಹಿಡಿದು ಉತ್ತರಾಷಾಢ ನಕ್ಷತ್ರ 1 ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ( ಸುಮಾರಾಗಿ ಡಿಸೆಂಬರ್ ತಿಂಗಳ 16 ನೇ ತಾರೀಖಿನಿಂದ ಜನವರಿ 14 ರವೆರೆಗಿನ) ಸಮಯವನ್ನು ಧನುರ್ಮಾಸವೆಂದು ಕರೆಯುತ್ತಾರೆ.

ಇಂತಹ ಧನುರ್ಮಾಸದಲ್ಲಿ ವಿಶೇಷವಾಗಿ ಪರಮಾತ್ಮನನ್ನು ಹುಗ್ಗಿಯ ಅನ್ನವನ್ನು ಸಮರ್ಪಣೆ ಮಾಡಿ ಪೂಜಿಸುವುದರಿಂದ ವಿಶೇಷ ಫಲವಿದೆ ಎಂದು ಪುರಾಣಗಳು ಸಾರಿ ಹೇಳುತ್ತಿವೆ. ಈ ರೀತಿಯಾಗಿ -
ಧನುರ್ಮಾಸಪೂಜೆ

ಕೋದಂಡಸ್ತೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷೀಕೀಪೂಜಾ ದಿನೇನೈಕೇನ ಸಿದ್ಧ್ಯತಿ || ಆಗ್ನೇಯ ಪುರಾಣ

ಧನುರಾಶಿಯಲ್ಲಿ ಸೂರ್ಯನಿರುವಾಗ ಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆಮಾಡಿದ ಫಲವನ್ನು ಪಡೆಯುವನು ಎನ್ನುವ ಆಗ್ನೇಯ ಪುರಾಣದ ವಚನವಿದೆ. ಆದುದರಿಂದ ಧನುರ್ಮಾಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆಮುದ್ಗಾನ್ನವನ್ನು (ಹುಗ್ಗಿಯನ್ನು) ವಿಷ್ಣುವಿಗೆ ಸಮರ್ಪಿಸಿ ಬ್ರಾಹ್ಮಣಸಂತರ್ಪಣೆಮಾಡುವುದರಿಂದ ಶ್ರೀಹರಿಯು ಪ್ರೀತನಾಗುವನು.
ಧನುರ್ಮಾಸಪೂಜೆಯ ಕಾಲ :-

ಮುಖ್ಯಾರುಣೋದಯೇ ಪೂಜಾ ಮಧ್ಯಮಾ ಲುಪ್ತತಾರಕಾ |
ಅಧಮಾ ಸೂರ್ಯಸಹಿತಾ ಮಧ್ಯಾಹ್ನೇ ನಿಷ್ಫಲಾ ಭವೇತ್ ||

ಇಂತಹ ಪೂಜೆಗೆ ಮುಖ್ಯಕಾಲಅರುಣೋದಯ ಕಾಲವು ಉತ್ತಮ, ನಕ್ಷತ್ರಗಳು ಕಾಣದಿರುವಾಗ ಮಾಡುವುದುಮಧ್ಯಮ, ಸೂರ್ಯನು ಉದಯಿಸಿದ ಮೇಲೆ ಮಾಡುವುದು ಅಧಮ.ಮಧ್ಯಾಹ್ನಕಾಲದಲ್ಲಿ ಮಾಡುವುದು ನಿಷ್ಫಲ. ಆದುದರಿಂದ ಈ ಧನುರ್ಮಾಸದಲ್ಲಿ ಭಗವಂತನ ಪೂಜೆಯನ್ನು ಉಷಃಕಾಲದಲ್ಲಿಯೇ ಮಾಡಬೇಕು.
ಹೇಗೆನಿತ್ಯದಲ್ಲಿಯೂ ಭಗವಂತನಿಗೆ ಷೋಡೋಶೋಪಚಾರ ಪೂಜೆಯನ್ನು ಸಲ್ಲಿಸಿ, ಭಗವಂತನಿಗೆನೈವೇದ್ಯಾದಿಗಳನ್ನು ಸಮರ್ಪಿಸುತ್ತೇವೆಯೋ ಹಾಗೆಯೇ ಧನುರ್ಮಾದಲ್ಲಿ ವಿಶೇಷವಾಗಿ ಅರುಣೋದಯಕಾಲದಲ್ಲಿಯೇ ಹುಗ್ಗಿಯನ್ನು ಮಾಡಿ ಭಗವಂತನಿಗೆ ಸಮರ್ಪಿಸಬೇಕು.ಹುಗ್ಗಿಯನ್ನು ಹೇಗೆ ಮಾಡಬೇಕೆಂಬುದನ್ನೂ ಪುರಾಣವೇ ತಿಳಿಸುತ್ತಿದೆ, ಹೀಗೆ -


ಮುದ್ಗಂ ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಯತೇ |
ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವತ್ ||
ಮುದ್ಗಂದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾಃ |
ಯಥಾ ಬಲಂಪ್ರಕುರ್ವೀತ ನ ಹೀಯೇತ್ತಂಡುಲಾರ್ಧತಃ ||

ಅಂದರೆ - ಅಕ್ಕಿಯಷ್ಟೇ ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸಿ ಮಾಡುವ ಹುಗ್ಗಿಯು ಉತ್ತಮೋತ್ತಮ. ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರುಬೇಳೆಯನ್ನು ಸೇರಿಸಿದರೆ ಮಧ್ಯಮ. ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹಸರುಬೇಳೆಯನ್ನು ಸೇರಿಸಿದರೆ ಅಧಮ, ಅಕ್ಕಿಯ ಎರಡರಷ್ಟು ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸುವುದು ಇನ್ನೂ ಶ್ರೇಷ್ಠ ಎಂದು ಕೆಲವು ಮುನಿಗಳ ಅಭಿಪ್ರಾಯವಿದೆ. ಆದುದರಿಂದ ತನ್ನ ಶಕ್ತಿಯಿರುವಷ್ಟು ಶ್ರೇಷ್ಠ ರೀತಿಯಲ್ಲಿ ಹುಗ್ಗಿಯನ್ನು ತಯಾರಿಸಿ ಪರಮಾತ್ಮನಿಗೆ ನೈವೇದ್ಯವನ್ನು ಮಾಡಬೇಕು. ಎಂತಹ ಪ್ರಸಂಗದಲ್ಲಿಯೂ ಹೆಸರುಬೇಳೆಯ ಪ್ರಮಾಣವನ್ನು ಅಕ್ಕಿಯ ಪ್ರಮಾಣದ ಅರ್ಧಕ್ಕಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಹೀಗೆ ಪರಮಾತ್ಮನನ್ನು ಪೂಜಿಸಬೇಕು ಎಂದು ಹೇಳುತ್ತಾ ಧನುರ್ಮಾಸದಲ್ಲಿ ಮತ್ತೇನೇನು ಮಾಡಬೇಕು ಎಂದು ಹೇಳುತ್ತಾರೆ. ಹೀಗೆ-
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೇ ದಿನೇ |
ಉಷಃಕಾಲೇ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ದನಂ ||
ಉಪಚಾರೈಃಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀ ದಿನೇ ||
ತಥಾಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾಣ್ಯರ್ಚಯೇಚ್ಚ ಮಾಂ ||

ಆದುದರಿಂದ ಸರ್ವಪ್ರಯತ್ನದಿಂದ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃಕಾಲದಲ್ಲಿ ಪರಮಾತ್ಮನನ್ನುಷೋಡಶೋಪಚಾರಗಳಿಂದ ಪೂಜಿಸಿ ಹುಗ್ಗಿಯನ್ನು ಸಮರ್ಪಿಸಬೇಕು ಹೇಗೆ ಸಾಧನಾ ದ್ವಾದಶೀಯಂದು ಪ್ರಯತ್ನಪೂರ್ವಕವಾಗಿ ಜಪ-ತಪಾದಿಗಳನ್ನು ಸಂಕೋಚಗೊಳಿಸಿಪಾರಣೆಯನ್ನು ಮಾಡುತ್ತೇವೆಯೋ ಹಾಗೆಯೇ ಈ ಧನುರ್ಮಾಸದಲ್ಲಿಯೂ ಪ್ರತಿನಿತ್ಯ ಆಚರಿಸಬೇಕು. ಈ ರೀತಿಯಾಗಿ ಪೂಜೆ ಸಲ್ಲಿಸಿರುವುದರಿಂದ ಏನು ಫಲ ಬರುವುದೆಂದು ತಿಳಿಸುತ್ತಿದೆ ಪುರಾಣವು -

ದಧ್ಯಾದ್ರ್ರಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ವಲಂ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್ ||
ದೃಷ್ಟ್ವಾ ತಚ್ಛುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲಃ |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಜಗದೀಶ್ವರಃ||

ಮೊಸರು, ಹಸಿಶುಂಠಿ, ಹೆಸರುಬೇಳೆ, ಬೆಲ್ಲ, ಕಂದಮೂಲ ಫಲಗಳಿಂದ ಕೂಡಿದ ಹುಗ್ಗಿಯನ್ನು ಪರಮಾತ್ಮನಿಗೆ ಸಮರ್ಪಿಸಿದರೆ ಭಕ್ತವತ್ಸಲನಾದ ಪರಮಾತ್ಮನು ತನ್ನ ಭಕ್ತರಿಗೆ ಸಕಲವಿಧವಾದ ಭೋಗಗಳನ್ನು, ಕೊನೆಗ ಮೋಕ್ಷವನ್ನೂ ಕೊಡುತ್ತಾನೆ.
ಹೀಗೆಪರಮಾತ್ಮನನ್ನು ಪೂಜಿಸಿದ ನಂತರ ಅವಶ್ಯವಾಗಿ ಶ್ರೀ ಲಕ್ಷ್ಮೀ ಸ್ತೋತ್ರವನ್ನು ಅವಶ್ಯವಾಗಿಪಠಿಸಬೇಕು -

ಶ್ರೀದೇವಿ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ ||
ಪಂಚಮಂವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ .|
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ ||
ನವಮಂಶಾರ್ಙಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ ||
ಶ್ರೀಃಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ |
ಮಾ ಕ್ಷೀರಾಬ್ಧಿಸುತಾರವಿಂದಜನನೀ ವಿದ್ಯಾ ಸರೋಜಾತ್ಮಿಕಾ |
ಸರ್ವಾಭೀಷ್ಫಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃಶುದ್ಧತರಾ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ ||
ಭದ್ರಲಕ್ಷ್ಮೀಸ್ತವಂನಿತ್ಯಂ ಪುಣ್ಯಮೇತಚ್ಛುಭಾವಹಂ |
ತುಲೌ ಸ್ನಾತ್ವಾಪಿ ಕಾವೇರ್ಯಾಂ ಜಪಶ್ರೀವೃಕ್ಷಸನ್ನಿಧೌ ||

ಎಂಬುದಾಗಿ. ಹಾಗೆಯೇ ಈ ಧನುರ್ಮಾಸದಲ್ಲಿ ಬರುವ ವ್ಯತೀಪಾತ,ವೈಧೃತಿ ಯೋಗಗಳಂದು ವಿಶೇಷವಾಗಿ ಪೂಜೆಯನ್ನು ಸಲ್ಲಿಸಬೇಕೆಂದು ಹೇಳುತ್ತದೆ -

ಮಹಾವ್ಯತೀಪಾತಯೋಗ
ಅರ್ಧೋದಯಸಹಸ್ರಾಣಿ ವಾಜಪೇಯಾದಯೋಧ್ವರಾಃ |
ಮಾರ್ಗಶೀಷ್ವ್ಯತೀಪಾತಕಲಾಂನಾರ್ಹಂತಿ ಷೋಡಶೀಂ ||
ಮಾರ್ಗಶೀರ್ಷವ್ಯತೀಪಾತೇ ಪಿತÙೃನುದ್ದಿಶ್ಯ ತರ್ಪಯನ್ |
ಅಘ್ರ್ಯಂ ದದ್ಯಾದ್ಧರಿಂ ಧ್ಯಾಯನ್ ಮೂಲಮಂತ್ರೇಣ ಮಾನವಃ ||

ಧನುರ್ಮಾಸದಲ್ಲಿ ಬರುವ ವ್ಯತೀಪಾತಯೋಗವಿರುವ ದಿನದ 16ನೇ ಒಂದು ಅಂಶವನ್ನೂ ಕೂಡ ಸಹಸ್ರ ಅರ್ಧೋದಯಗಳೂ, ವಾಜಪೇಯ ಮೊದಲಾದ ಮಹಾಯಾಗಗಳೂ ಹೊಂದಲಾರವು. ಈ ವ್ಯತೀಪಾತಯೋಗದಲ್ಲಿ ಉಷಃಕಾಲದಲ್ಲಿ ವಿಷ್ಣುವನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸಿ, ಅಘ್ರ್ಯವನ್ನು ಕೊಟ್ಟ ನಂತರ ಪಿತೃದೇವತೆಗಳಿಗೆ ತಿಲತರ್ಪಣವನ್ನು ಕೊಡತಕ್ಕದ್ದು. ವಿಷ್ಣು ಪೂಜೆಯ ನಂತರ ಅಘ್ರ್ಯವನ್ನು ಈ ಮಂತ್ರದಿಂದ ಕೊಡತಕ್ಕದ್ದು - ಅಘ್ರ್ಯಮಂತ್ರ-

ವ್ಯತೀಪಾತಮಹಾಸತ್ವ ಸರ್ವಪಾಪ ಪ್ರಣಾಶನ |
ಸಹಸ್ರಬಾಹೋವಿಶ್ವಾತ್ಮನ್ ಗೃಹಣಾಘ್ರ್ಯಂ ನಮೋಸ್ತುತೇ ||
ವ್ಯತೀಪಾತನಮಸ್ತೇಸ್ತು ನಮಸ್ತೇ ವಿಷ್ಣುಮಂಗಲ |
ವಿಷ್ಣುಚಕ್ರಸ್ವರೂಪಾಯನಮಸ್ತೇ ದಿವ್ಯತೇಜಸೇ ||

ಎಂದು ಈ ಮಂತ್ರದಿಂದ ವಿಷ್ಣುವಿಗೆ ಒಂದು ಅಘ್ರ್ಯವನ್ನು ಕೊಡಬೇಕು.ನಂತರ ಪಿತೃತರ್ಪಣವನ್ನಿತ್ತು ಈ ಕೆಳಗಿನ ಮಂತ್ರದಿಂದ ಪ್ರಾರ್ಥನೆ ಮಾಡಬೇಕು.ಪ್ರಾರ್ಥನಾ ಮಂತ್ರ -
ವಿಷ್ಣುಪ್ರಿಯವ್ಯತೀಪಾತ ಪಿತೃಣಾಂ ಮನೃಣಪ್ರದ |
ಪಿತೃಣಾಂಮಮ ವೈಕುಂಠಂ ಪ್ರಯಚ್ಛ ಭಗವನ್ ಹರೇ ||
ತ್ವತ್ಪ್ರಸಾದೇನಮೇ ಭಕ್ತಿರಸ್ತ್ವೇವಮನಪಾಯಿನೀ ||

ಎಂದು ಪ್ರಾರ್ಥಿಸಬೇಕು. ಇದರಂತೆ ವೈಧೃತಿಯೋಗವೂ ಕೂಡ ವಿಶೇಷ ಫಲವುಳ್ಳದ್ದಾಗಿದೆ.
ಉಷಃಪೂಜಾಂ ಧನುರ್ಮಾಸೇ ಯೋ ನ ಕುರ್ವೀತವೈಷ್ಣವೀಂ |
ಸಪ್ತಜನ್ಮಸು ರಿಕ್ತಃ ಸ್ಯಾತ್ ಕ್ಷಯರೋಗೀ ಚ ಮೂಢಧೀಃ ||

ಧನುರ್ಮಾಸದಲ್ಲಿ ಉಷಃಕಾಲದಲ್ಲಿ ವಿಷ್ಣುಪೂಜೆ ಮಾಡದವನು ಏಳು ಜನ್ಮಗಳಲ್ಲಿ ಬಡವನೂ, ಮೂಢನೂ, ಕ್ಷಯರೋಗಿಯೂ ಆಗುವನು. ಆದುದರಿಂದಮಹಾಪುಣ್ಯಕರವಾದ ಧನುರ್ಮಾಸದಲ್ಲಿ ಪ್ರಾತಃಕಾಲದಲ್ಲಿ ಪರಮಾತ್ಮನನ್ನು ಪೂಜಿಸಿಸಾರ್ಥಕತೆಯನ್ನು ಪಡೆಯೋಣ.


--
ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಂ", ಶ್ರೀರಾಮಮಂದಿರದ ಹತ್ತಿರ, ಸಿಂಧನೂರು -584128
 

Saturday, December 1, 2012

ಕನಕದಾಸರ ಮುಂಡಿಗೆ

ಕನಕದಾಸರ ಮುಂಡಿಗೆ

ಮುಂಡಿಗೆ ದಾಸರೆಂದು ಪ್ರಸಿದ್ಧರಾದ ಶ್ರೀಕನಕದಾಸರು ತಮ್ಮ ಅನೇಕ ಪದ್ಯಗಳಲ್ಲಿ ಮಹಾಭಾರತ, ರಾಮಾಯಣ ಹಾಗು ಭಾಗವತದ ವಿಷಯಗಳನ್ನು ಒಂದೊಂದು ನುಡಿಗಳಲ್ಲಿ ಒಗಟಿನ ರೂಪದಲ್ಲಿ ನೀಡಿ ಓದುವವರ ಮೆದುಳಿಗೆ ಆಹಾರವನ್ನು ನೀಡಿ ಚಿಂತನೆಗೆ ಹಚ್ಚುತ್ತಾರೆ. ಅಂತಹ ಪದ್ಯಗಳಲ್ಲಿ ಒಂದಾದ "ಈತನೀಗ ವಾಸುದೇವನೋ" ಎಂಬ ಪದದ ಅರ್ಥ ಚಿಂತನೆ ಮಾಡೋಣ.  ಈ ಹಾಡಿಗೆ ಮೊದಲೇ ಒಂದು ವ್ಯಾಖ್ಯಾನ ಡಿಸೆಂಬರ್-2010 ಹಾಗು ಡಿಸೆಂಬರ್-2011 ಸಂಚಿಕೆಯಲ್ಲಿ ಬಂದಿದ್ದರೂ, ಅದು ಸಮಂಜಸವಾಗಿಲ್ಲದ ಕಾರಣ ಈ ಲೇಖನ ಬರೆಯಲಾಗಿದೆ.

ಈತನೀಗ ವಾಸುದೇವನೋ, ಲೋಕದೊಡೆಯ || ಪ ||
ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ||ಅ.ಪ||

ಸರ್ವ ಜೀವರಿಗೂ ಮೊಕ್ಷಪ್ರದನಾದ ಶ್ರೀ ವಾಸುದೇವನು, ಇಡೀ ಬ್ರಹ್ಮಾಂಡದ ಸೃಷ್ಟಿ-ಸ್ಥಿತಿ-ಲಯ ಕರ್ತನಾಗಿ ಅದರ ಸಂಪೂರ್ಣ ಒಡೆಯನಾಗಿದ್ದಾಗ್ಯೂ, ತನ್ನ ದಾಸನಾದ ಅರ್ಜುನನಿಗೊಲಿದು, ಮಹಾಭಾರತ ಯುದ್ಧದಲ್ಲಿ ಅವನ ರಥಕ್ಕೆ ಸಾರಥ್ಯವನ್ನು ಮಾಡಿ ತಾನು ಭಕ್ತಪರಾಧೀನ ಎಂದು ಲೋಕಕ್ಕೆ ತಿಳಿಸಿಕೊಟ್ಟ ಎನ್ನುವುದು ಇಲ್ಲಿಯ ಭಾವಾರ್ಥ.

ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸಿದ
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ  ||1||

ದನುಜೆ-ಹಿಡಿಂಬಿಯ -- ಆಳ್ದ-ಪತಿಯಾದ ಭೀಮನ -- ಅಣ್ಣನ-ಧರ್ಮರಾಯನ -- ಅಯ್ಯನ-ಯಮಧರ್ಮನ -- ಪಿತನ-ಸೂರ್ಯನ ಮುಂದೆ -- ಕೌರವೇಂದ್ರನನುಜೆ-ದಶ್ಶೀಲೆಯ -- ಆಳಿದವನ-ಪತಿಯಾದ ಜಯದ್ರಥನ ಶಿರವ ಕತ್ತರಿಸಿದ -- ತನ್ನ-ಅನುಜೆ - ಅಂದರೆ ಕೃಷ್ಣನ ತಂಗಿ ಸುಭದ್ರೆ -- ಆಳಿದವನ-ಪತಿಯಾದ  ಅರ್ಜುನನನ್ನು ಬೆಂಕಿ ಮುಟ್ಟದಂತೆ ಕಾಯ್ದು --    ಸೂರ್ಯಾಸ್ತ ವಾಗುವುದರೊಳಗಾಗಿ ಜಯದ್ರಥನ ಶಿರವ ತೆಗೆಯದಿದ್ದರೆ, ಅಗ್ನಿಪ್ರವೇಶ ಮಾಡುತ್ತೇನೆಂದು ಅರ್ಜುನನ  ಮಾಡಿದ ಪ್ರತಿಙ್ಞೆಯನ್ನು ನೆರವೇರುವಂತೆ ಮಾಡಿದ -- ರುಕ್ಮನನುಜೆಯ-ರುಕ್ಮಿಣಿಯ -- ಆಳಿದವನ-ಕೃಷ್ಣ (ವಾಸುದೇವ) ಮೂರ್ತಿಯನ್ನು ನೋಡಿರೋ.

ನರನ ಸುತನರವಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಟು ತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹ ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಭೇದಿಸಿದ ದೇವ ಕಾಣಿರೋ.

-- ಈ ನುಡಿಗೆ ಅರ್ಥ ತಿಳಿದಿಲ್ಲ --


ಸೃಷ್ಟಿ ಕರ್ತನಿಗೆ ಮಗನಾದವನಿಗಿಷ್ಟ ಭೂಷಣ ಆಶನನಾದನ
ಜ್ಯೇಷ್ಟ ಪುತ್ರಗೆ ವೈರಿ ತೊಡೆಯ ಭೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-
ತ್ಕೃಷ್ಟ ಮಹಿಮನಾದ ದೇವ ಕಾಣಿರೋ

ಸೃಷ್ಟಿ ಕರ್ತನಿಗೆ-ಬ್ರಹ್ಮನಿಗೆ -- ಮಗನಾದವನಿಗೆ-ರುದ್ರದೇವರಿಗೆ -- ಇಷ್ಟ ಭೂಷಣ-ಸರ್ಪಕ್ಕೆ -- ಆಶನನಾದನ-ಆಹಾರವಾದ ವಾಯುವಿನ -- ಜ್ಯೇಷ್ಟ ಪುತ್ರಗೆ-ಭೀಮನಿಗೆ -- ವೈರಿ ತೊಡೆಯ ಭೇದಿಸೆಂದು-ಕೌರವನ ತೊಡೆಗೆ ಗದಾ ಪ್ರಹಾರ ಮಾಡೆಂದು ತಿಳಿಸಿ ತನ್ನ ಭಕ್ತರಾದ ಪಾಂಡವರ ಕಷ್ಟವನ್ನು ಕಳೆದು ಅವರನ್ನು ಉದ್ದಾರ ಮಾಡಿದ ಉತ್ಕೃಷ್ಟ ಮಹಿಮೆಯುಳ್ಳ ದೇವ ನೋಡಿರೋ.

ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸ್ಯಾಗ
ವೀರನೆಚ್ಚ ಯೆಸುಗೆ ಬಪ್ಪುದನ್ನು ಈಕ್ಷಿಸಿ
ಧಾರಿಣಿಯ ಪರದೊಳೌಕಿ ಚರಣ ಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ನೋಡಿರೋ

ಖಾಂಡವವನ ದಹನ ಮಾಡಿ ತನ್ನ ನೆಲೆಯನ್ನು ನಾಶ ಮಾಡಿದನೆಂಬ ಕಾರಣಕ್ಕಾಗಿ ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದ ಸರ್ಪ, ಮಹಾಭಾರತ ಯುದ್ಧದಲ್ಲಿ ಕರ್ಣನ ಬಾಣದಲ್ಲಿ ಸೇರಿಕೊಂಡು, ಆ ಬಾಣವನ್ನು ಕರ್ಣನು ಅರ್ಜುನನ ಶಿರಕ್ಕೆ ಗುರಿಯಿಟ್ಟು ಪ್ರಯೋಗಿಸಿದಾಗ -- ಅದನ್ನು ತಿಳಿದ ಅರ್ಜುನನ ರಥದಲ್ಲಿನ ಕೃಷ್ಣನು ತನ್ನ ಪಾದದಿಂದ ಭೂಮಿಯನ್ನು ಕೆಳಗೆ ಒತ್ತಿ, ಆ ಮೂಲಕ ರಥವನ್ನು ಸಹ ಕೆಳಗೆ ಇಳಿಯುವಂತೆ ಮಾಡಿ, ಆ ಬಾಣ, ಅಜರ್ುನನ ಕಿರೀಟವನ್ನು ಹಾರಿಸಿಕೊಂಡು ಹೋಗುವಂತೆ ಮಾಡಿ, ತನ್ನ ಚರಣ ಭಜಕನಾದ ನರ ಅಂದರೆ ಅರ್ಜುನನನ್ನು ಕಾಯ್ದ, ಭಕ್ತರ ಭಾರವನ್ನು ಹೋರುವಂತ ದೇವನೀತ ಕಾಣಿರೋ.

ವ್ಯೋಮಕೇಶ ನಿಪ್ಪದಿಸೆಯ ಆ ಮಹಾ ಮಹಿಮೆಯುಳ್ಳ
ಸಾಮಜವನೇರಿ ಬರುವ ಶಕ್ತಿಯ ನೀಕ್ಷಿಸಿ
ಪ್ರೇಪದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-
ಭೌಮ ಬಡದಾದಿ ಕೇಶವನ್ನ ನೋಡಿರೋ

ವ್ಯೋಮಕೇಶ-ರುದ್ರ ದೇವರ -- ಇಪ್ಪದಿಸೆಯ-ದಿಕ್ಕಾದ ಈಶಾನ್ಯದಲ್ಲಿ ಇರುವ ಪ್ರಾಗ್ಜೋತಿಷಪುರ ಅಂದರೆ ಈಗಿನ ಅಸ್ಸಾಂ ರಾಜ್ಯದ ರಾಜನಾಗಿದ್ದ ನರಕಾಸುರನ ಮಗ ಭಗದತ್ತನು ಆನೆಯೇರಿ ಬರುತ್ತಾ ಅರ್ಜುನನ ಮೇಲೆ ಪ್ರಯೋಗಿಸಿದ್ದ ಶಕ್ತ್ಯಾಯುಧಕ್ಕೆ, ಭಕ್ತನ ಮೇಲಿನ ಪ್ರೀತಿಯಿಂದ, ಆಯುಧಕ್ಕೆ ತನ್ನ ಎದೆಯನ್ನೆ ಒಡ್ಡಿ, ಆಯುಧವನ್ನು ಶಾಂತಗೊಳಿಸಿ, ತನ್ನ ಭಕ್ತನನ್ನು ಕಾಯ್ದ ಕಾಯ್ದ ಸಾರ್ವಭೌಮ ಬಡದಾದಿ ಕೇಶವನ್ನ ನೋಡಿರೋ.



ಕೆ. ಸತ್ಯನಾರಾಯಣ ರಾವ್
"ಈಶಾವಾಸ್ಯಂ",
ವಿವೇಕಾನಂದ ನಗರ,
ಸಂಡೂರು ರಸ್ತೆ, ಹೊಸಪೇಟೆ.
ಮೊ: 9449250043